CRECT Education

Class 5 Kannada Lesson 12: The Kite | KTBS Second Language – Learn the Story

Description

Learn the story 'ಗಾಳಿಪಟ' (The Kite) from Class 5 Kannada Second Language (KTBS). Children fly kites, explore colors and shapes, face wind chaos, and discover joy.

ಗದ್ಯ (prose) · ಸಂಪಾದಿತ (Edited/Compiled)

ಪಠ್ಯFull text

ಊರ ಮುಂದಿನ ಬಯಲಿನಲ್ಲಿ ಮಕ್ಕಳ ಕಲರವವೋ ಕಲರವ. ಅವರ ನೋಟ ಆಗಸದ ಕಡೆಗೆ. ಅರೆರೆ! ಅದೋ ನೋಡಿ! ಮೇಲೇಕೆಳಗೆ ಲಾಗ ಹೊಡೆಯುವ ಚೆಲುವಿನ ತಾರೆಗಳು! ಪಟಪಟ ಗಾಳಿಪಟಗಳು. ಅಬ್ಬಬ್ಬಾ! ಬಗೆಬಗೆಯ ಪಟಗಳಿವು, ಬುಗುರಿ ಪಟ, ಹನುಮನ ಪಟ, ತಾರಾ ಪಟ, ಆಯತ ಪಟ, ಚೌಕದ ಪಟ, ಕೋಲ ಪಟ, ಗಾಳಿಯ ಪಟ, ಹಾವಿನ ಪಟ, ಹೀಗೆ ಸಾಲುಸಾಲಾಗಿ ಹಾರುವ ಸರಣಿ ಪಟಗಳು. ಆಗಸಕೆ ದಾಳಿಯಿಡುವ ಪಟಗಳೋ ನೂರಾರು. ರಂಗುಗಳೋ ಹಲವಾರು. ಕೆಂಪು, ಕೇಸರಿ, ಹಸಿರು, ನೀಲಿ, ಹಳದಿ ರಂಗುರಂಗಿನ ರಂಗೋಲಿ ಮೂಡಿಸಿವೆ. ಗಾಳಿಪಟಗಳ ರೂಪು-ರಂಗುಗಳು ಸಾವಿರ ತರಹ. ಆದರೆ ಅವುಗಳಿಗೆ ಹಾಕುವ ದಾರದ ಗಂಟು ಒಂದೇ ತರಹ. ಮೇಲೆ ಮೇಲೆ ಹಾರಲು ಪಟಗಳಿಗೆ ಬೇಕು ಬಾಲಂಗೋಚಿ. ಅದು ಸಮತೋಲನ ಬಾಲಂಗೋಚಿ. ಆಗಸದಿ ಬಳುಕುವ ಈ ಪಟಗಳು, ಕೆಲವರಿಗೆ ಮಾವು ತರಲು ಆಗಸಕೆ ಹಾರಿದ ಬಾಲಹನುಮನಂತೆ ಕಾಣುವುವು. ಹಲವರಿಗೆ ನೀಲಿ ಸಾಗರದಲಿ ಈಜುವ ರಂಗುರಂಗಿನ ಮೀನುಗಳಾಗಿ ಕಾಣುವುವು. ತಿಳಿದವರಿಗೆ ಮಾನವರ ಸಂದೇಶವನ್ನು ದೇವಲೋಕಕ್ಕೆ ಸಾಗಿಸುವ ರಾಯಭಾರಿಗಳಂತೆ ಕಾಣುವುವು. ವಿಧವಿಧ ರಂಗು, ಬಗೆಬಗೆ ಆಕಾರದ ಪಟಗಳು, ನೀಲಿ ನಭಕೆ ರಂಗು ಬಳಿಯುವ ಮಕ್ಕಳ ಆಟವಿದು. ಮೇಲಾಟದಲಿ ಸಂತಸಪಡುವ ತುಂಟಾಟವಿದು. ಮನ ಸೆಳೆಯುವ ನೋಟವಿದು. ಪಟ ಹಾರಿಸಲು ಸುಳಿವ ಗಾಳಿಬೇಕು. ಅದು ಸುಂಟರಗಾಳಿಯಾದರೆ ಸಂಕಟವೋ ಸಂಕಟ. ಬಾಲಂಗೋಚಿ ಹರಿದರೆ ಗಿರಿಗಿರಿ ತಿರುತಿರುಗಿ ಗಿರಕಿ ಹೊಡೆಯುವವು. ಮೇಲೆ ಹಾರಲಾರದೆ ಕೆಳಗಿಳಿದು ಬರಲು ಹಟ ಹಿಡಿಯುವವು. ಬಿರುಗಾಳಿ ಬೀಸಿತೆಂದರೆ ದಾರ ಹರಿದು ಜಟಾಪಟಿ. ಮಕ್ಕಳು ಗಾಳಿಗೆ ಹಿಡಿಶಾಪ ಹಾಕುವರು. ಮರುಗಳಿಗೆ ಪಟ ಹಿಡಿಯಲು ಓಡುವರು. ಮಾಳಿಗೆಯಿಂದ ಮಾಳಿಗೆಗೆ ಜಿಗಿಯಲು ಆರಂಭವಾಗುವುದು. ಆಗ ತಂದೆ ತಾಯಿಗಳ ಗೋಳಾಟ. ಮಕ್ಕಳಿಗೆ ಆಟ, ಪಾಲಕರಿಗೆ ಸಂಕಟ. ದಾರ ಹರಿದ ಪಟ ಹಿಡಿದರೆ, ಆಗ ನೋಡು ಸಂತಸದ ನೋಟ! ಎಂದೂ ಕಾಣದ ಆನಂದದ ಕೂಟ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

  1. ೧. ಮಕ್ಕಳು ಗಾಳಿಪಟ ಹಾರಿಸಲು ಎಲ್ಲಿ ಸೇರಿದ್ದರು?

    Answer

    ಮಕ್ಕಳು ಗಾಳಿಪಟ ಹಾರಿಸಲು ಊರ ಮುಂದಿನ ಬಯಲಿನಲ್ಲಿ ಸೇರಿದ್ದರು.

  2. ೨. ವಿವಿಧ ಬಗೆಯ ಗಾಳಿಪಟಗಳು ಯಾವುವು?

    Answer

    ವಿವಿಧ ಬಗೆಯ ಗಾಳಿಪಟಗಳೆಂದರೆ ಬುಗುರಿ ಪಟ, ಹನುಮನ ಪಟ, ತಾರಾ ಪಟ, ಆಯತ ಪಟ, ಚೌಕದ ಪಟ, ಕೋಲ ಪಟ, ಗಾಳಿಯ ಪಟ, ಹಾವಿನ ಪಟ ಮತ್ತು ಸರಣಿ ಪಟಗಳು.

  3. ೩. ಗಾಳಿಪಟಗಳಿಗೆ ಬಾಲಂಗೋಚಿ ಏಕೆ ಬೇಕು?

    Answer

    ಗಾಳಿಪಟಗಳಿಗೆ ಮೇಲೆ ಮೇಲೆ ಹಾರಲು ಸಮತೋಲನಕ್ಕಾಗಿ ಬಾಲಂಗೋಚಿ ಬೇಕು.

  4. ೪. ಗಾಳಿಪಟಗಳ ಬಾಲಂಗೋಚಿ ಹರಿದರೆ ಏನಾಗುವುದು?

    Answer

    ಗಾಳಿಪಟಗಳ ಬಾಲಂಗೋಚಿ ಹರಿದರೆ ಅವು ಗಿರಿಗಿರಿ ತಿರುತಿರುಗಿ ಗಿರಕಿ ಹೊಡೆಯುತ್ತವೆ ಮತ್ತು ಮೇಲೆ ಹಾರಲಾರದೆ ಕೆಳಗಿಳಿದು ಬರುತ್ತವೆ.

  5. ೫. ಆಕಾಶದಲ್ಲಿ ಹಾರುವ ಗಾಳಿಪಟಗಳು ಜನರಿಗೆ ಹೇಗೆ ಕಾಣುತ್ತಿದ್ದವು?

    Answer

    ಆಕಾಶದಲ್ಲಿ ಹಾರುವ ಗಾಳಿಪಟಗಳು ಕೆಲವರಿಗೆ ಮಾವು ತರಲು ಹಾರಿದ ಬಾಲಹನುಮನಂತೆ, ಹಲವರಿಗೆ ನೀಲಿ ಸಾಗರದಲ್ಲಿ ಈಜುವ ರಂಗುರಂಗಿನ ಮೀನುಗಳಂತೆ ಮತ್ತು ತಿಳಿದವರಿಗೆ ಮಾನವರ ಸಂದೇಶವನ್ನು ದೇವಲೋಕಕ್ಕೆ ಸಾಗಿಸುವ ರಾಯಭಾರಿಗಳಂತೆ ಕಾಣುತ್ತಿದ್ದವು.

ಆ) ಈ ಸಾಲುಗಳನ್ನು ಗಟ್ಟಿಯಾಗಿ ಓದಿರಿ.

  1. ೧. ಮೇಲೆ ಕೆಳಗೆ ಲಾಗ ಹೊಡೆಯುವ ಚೆಲುವಿನ ತಾರೆಗಳು! ಪಟಪಟ ಗಾಳಿಪಟಗಳು.

  2. ೨. ವಿಧವಿಧ ರಂಗು, ಬಗೆಬಗೆ ಆಕಾರದ ಪಟಗಳು, ನೀಲಿ ನಭಕೆ ರಂಗು ಬಳಿಯುವ ಮಕ್ಕಳ ಆಟವಿದು. ಮೇಲಾಟದಲಿ ಸಂತಸ ಪಡುವ ತುಂಟಾಟವಿದು. ಮನ ಸೆಳೆಯುವ ನೋಟವಿದು.

  3. ೩. ತಂದೆ ತಾಯಿಗಳ ಗೋಳಾಟ. ಮಕ್ಕಳಿಗೆ ಆಟ, ಪಾಲಕರಿಗೆ ಸಂಕಟ.

ಇ) ಇವುಗಳನ್ನು ಹಲವು ಸಲ ವೇಗವಾಗಿ ಉಚ್ಚರಿಸಿರಿ.

  1. ೧. ಕಾಗೆಪುಕ್ಕ, ಗುಬ್ಬಿಪುಕ್ಕ.

  2. ೨. ಅಶ್ವತ್ಥರಳಿ ಮರದ ಬುಡದ ತಳಿರೊಡೆದೆರೆಡೆಲೆಯಾಯ್ತು.

  3. ೩. ಕಸ್ತೂರಿರಂಗ ಕಿತ್ತೂರು ರಸ್ತೇಲಿ ಪಿಸ್ತೂಲೇಟ್ ತಿಂದ್ ಸತ್‌ಬಿದ್ದಿದ್ದಂತೆ.

  4. ೪. ತರಿಕೆರೆ ಏರಿಮ್ಯಾಲೆ ಮೂರುಕರಿ ಕುರಿಮರಿ.

ಈ) ಕೆಳಗೆ ನೀಡಿರುವ ಜಾಗದಲ್ಲಿ ವಿವಿಧ ಗಾಳಿಪಟಗಳ ಚಿತ್ರ ಬರೆಯಿರಿ.

  1. (A large empty rectangular box is provided for the student to draw pictures of different kinds of kites).

Interactive Lab