CRECT Education

Class 5 Kannada Lesson 14: Brave Boy Narendra | KTBS Kannada Second Language – Learn the Story

Description

The inspiring tale of young Narendra – fearless, curious, and razor‑focused – who grows up to become Swami Vivekananda. Learn key vocabulary from the story.

ಗದ್ಯ · ಸಂಪಾದಿತ

ಪಠ್ಯFull text

ಒಬ್ಬ ಬಾಲಕ ಕಣ್ಣುಚ್ಚಿ ಚಿಂತನೆ ಮಾಡುತ್ತಿದ್ದ. ಮೈ ಮೇಲೆ ಪರಿವಿರಲಿಲ್ಲ. ಅವನ ಮೇಲೆ ಹಾವೊಂದು ಹರಿದು ಹೋಯಿತು. ಅವನ ಗೆಳೆಯರು ನೋಡಿದರು. ಗಾಬರಿಯಾಗಿ ಓಡಿದರು. ತುಸು ಸಮಯದ ನಂತರ ಹುಡುಗರು ಓಡಿ ಬಂದರು. ಅವನನ್ನು ಮುಟ್ಟಿ ಎಚ್ಚರಿಸಿದರು. ಹಾವು ಹರಿದಾಡಿದ ವಿಷಯ ತಿಳಿಸಿದರು. ಹುಡುಗ ಭಯಪಡಲಿಲ್ಲ. ಅವನು “ಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ” ಎಂದನು. ಈ ಹುಡುಗನ ಮನೆಯ ಬಳಿ ಒಂದು ದೊಡ್ಡ ತೋಟವಿತ್ತು. ಅಲ್ಲಿ ಮಾವಿನ ಮರವಿತ್ತು. ಅವನು ಮತ್ತು ಅವನ ಗೆಳೆಯರು ಆ ಮರವನ್ನು ಹತ್ತುತ್ತಿದ್ದರು. ಕೊಂಬೆಯಿಂದ ಕೊಂಬೆಗೆ ಹಾರುತ್ತಾ, ಕೂಗುತ್ತಾ ಆಟವಾಡುತ್ತಿದ್ದರು. ಇದರಿಂದ ಮಾಲಿಗೆ ಬೇಸರವಾಯಿತು. ಅವನು “ಆ ಮರದಲ್ಲಿ ಭೂತ ಇದೆ. ನೀವು ಈಗಲೇ ಜಾಗ ಬಿಟ್ಟು ಹೋಗಿ, ಇಲ್ಲದಿದ್ದರೆ ನಿಮ್ಮನ್ನೆಲ್ಲ ನುಂಗಿಬಿಡುತ್ತದೆ” ಎಂದನು. ಈ ಮಾತನ್ನು ಕೇಳಿದ ಬಾಲಕರು ಹೆದರಿ ಓಡಿಹೋದರು. ಈ ಹುಡುಗ ಮಾತ್ರ ಅಲ್ಲಿಯೇ ಇದ್ದ. ಭಯದ ಬದಲು ಭೂತದ ಬಗ್ಗೆ ಅವನಿಗೆ ಕುತೂಹಲ. ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಭೂತವನ್ನು ಎದುರಿಸಲು ಸಿದ್ಧನಾದನು. ಭೂತ ಬರಲೇ ಇಲ್ಲ. ಕಾದು ಕಾದು ನಿರಾಶನಾದ. ಇದು ಹುಡುಗರನ್ನು ಓಡಿಸಲು ಉಪಾಯ ಎಂದು ಅರಿತನು. ಕೂಡಲೇ ಗೆಳೆಯರನ್ನು ಕರೆದನು. ಇಂತಹ ಭಯದ ಮಾತುಗಳನ್ನು ನಂಬಬಾರದೆಂದು ತಿಳಿ ಹೇಳಿದನು. ಇವನಾರು ಗೊತ್ತೆ? ಇವನೇ ನರೇಂದ್ರ. ಇವರು ದೊಡ್ಡವರಾದ ಮೇಲೆ ರಾಮಕೃಷ್ಣ ಪರಮಹಂಸರ ಶಿಷ್ಯರಾದರು. ಸ್ವಾಮಿ ವಿವೇಕಾನಂದ ಎಂದು ಅವರು ಹೆಸರಿಸಿದರು. ಇವರೊಮ್ಮೆ ಅಮೇರಿಕಾಗೆ ಹೋಗಿದ್ದರು. ಅಲ್ಲಿ ಡಾಯರ್‌ಸನ್ ಎಂಬುವವರ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡರು. ಅವರ ಮನೆಯಲ್ಲಿ ಪುಸ್ತಕ ಓದುತ್ತಾ ಕುಳಿತಾಗ ಡಾಯರ್‌ಸನ್ ಬಂದರು. ವಿವೇಕಾನಂದರು ಓದಿನ ಗುಂಗಿನಲ್ಲಿ ಇವರನ್ನು ಗಮನಿಸಲಿಲ್ಲ. ಮುಂದೆ ವಿವೇಕಾನಂದರು ಅವರೊಡನೆ ಮಾತನಾಡಲು ಆರಂಭಿಸಿದರು. ಪುಸ್ತಕದ ನೂರಾರು ಸಾಲುಗಳನ್ನು ಅದರಂತೆ ಉದಾಹರಿಸುತ್ತಿದ್ದರು. ಇದನ್ನು ಕಂಡು ಡಾಯರ್‌ಸನ್ ಬೆರಗಾದರು. “ಇದು ಹೇಗೆ ಸಾಧ್ಯ?” ಎಂದರು. “ಇದೆಲ್ಲ ಓದುವಾಗಿನ ಏಕಾಗ್ರತೆಯಿಂದ ಸಾಧ್ಯ. ಆ ಸಮಯದಲ್ಲಿ ಉರಿಯುವ ಕೆಂಡವನ್ನು ನನ್ನ ಮೇಲೆ ಇಟ್ಟರೂ ಗೊತ್ತಾಗುವುದಿಲ್ಲ” ಎಂದರು. ಭಾರತಕ್ಕೆ ಬಂದಮೇಲೆ ಇವರು ದೇಶದ ತುಂಬ ಸುತ್ತಿದರು. ಜನರ ಕಷ್ಟ ಅರಿತರು. ‘ಏಳಿ ಎದ್ದೇಳಿ! ಎಚ್ಚರಗೊಳ್ಳಿರಿ! ಗುರಿ ಮುಟ್ಟುವವರೆಗೆ ನಿಲ್ಲದಿರಿ’, ‘ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ’ ಎಂದು ಕರೆ ನೀಡಿದರು. * * * *

“ಏಳಿ ಎದ್ದೇಳಿ! ಎಚ್ಚರಗೊಳ್ಳಿರಿ! ಗುರಿ ಮುಟ್ಟುವವರೆಗೆ ನಿಲ್ಲದಿರಿ” — “Arise, awake! Stop not until the goal is reached.” A powerful call to action and perseverance.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. ಅರಿ - ತಿಳಿ

  2. ಏಕಾಗ್ರತೆ - ತದೇಕಚಿತ್ತತೆ.

  3. ಕುತೂಹಲ - ತವಕ; ತಿಳಿದುಕೊಳ್ಳುವ ಆಸಕ್ತಿ.

  4. ಗುಂಗು - ತಲ್ಲೀನತೆ; ಮುಳುಗುವಿಕೆ.

  5. ತಂಟೆ - ಗೋಜು; ಉಪದ್ರವ.

  6. ಪರಿವೆ - ಅರಿವು

  7. ಮಾಲಿ - ತೋಟ ಕಾಯುವವನು.

  8. ಉಪಾಯ - ಯುಕ್ತಿ

  9. ಕೆಂಡ - ಉರಿಯುತ್ತಿರುವ ಇದ್ದಿಲು.

  10. ಗಮನಿಸು - ಲಕ್ಷಿಸು

  11. ಚಿಂತನೆ - ಯೋಚನೆ; ಧ್ಯಾನ.

  12. ದೌರ್ಬಲ್ಯ - ಬಲಹೀನವಾದ.

  13. ಬೆರಗು - ಆಶ್ಚರ್ಯಪಡು

  14. ಸಿದ್ಧ - ಸಮರ್ಥ

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಬಾಲಕ ನರೇಂದ್ರನ ಮೇಲೆ ಏನು ಹರಿದು ಹೋಯಿತು?

    Answer

    ಬಾಲಕ ನರೇಂದ್ರನ ಮೇಲೆ ಹಾವೊಂದು ಹರಿದು ಹೋಯಿತು.

  2. ೨. ನರೇಂದ್ರ ತೋಟದಲ್ಲಿ ಯಾರಿಗಾಗಿ ಕಾದನು?

    Answer

    ನರೇಂದ್ರ ತೋಟದಲ್ಲಿ ಭೂತಕ್ಕಾಗಿ ಕಾದನು.

  3. ೩. ರಾಮಕೃಷ್ಣ ಪರಮಹಂಸರು ನರೇಂದ್ರನನ್ನು ಯಾವ ಹೆಸರಿನಿಂದ ಕರೆದರು?

    Answer

    ರಾಮಕೃಷ್ಣ ಪರಮಹಂಸರು ನರೇಂದ್ರನನ್ನು ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದ ಕರೆದರು.

  4. ೪. ಸ್ವಾಮಿ ವಿವೇಕಾನಂದರು ಜನರಿಗೆ ಕೊಟ್ಟ ಸಂದೇಶವೇನು?

    Answer

    ಸ್ವಾಮಿ ವಿವೇಕಾನಂದರು ‘ಏಳಿ ಎದ್ದೇಳಿ! ಎಚ್ಚರಗೊಳ್ಳಿರಿ! ಗುರಿ ಮುಟ್ಟುವವರೆಗೆ ನಿಲ್ಲದಿರಿ’, ‘ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ’ ಎಂಬ ಸಂದೇಶವನ್ನು ಜನರಿಗೆ ಕೊಟ್ಟರು.

  5. ೫. ಸ್ವಾಮಿ ವಿವೇಕಾನಂದರು ಜನರ ಕಷ್ಟ ಹೇಗೆ ಅರಿತರು?

    Answer

    ಸ್ವಾಮಿ ವಿವೇಕಾನಂದರು ಭಾರತದ ತುಂಬ ಸುತ್ತಿ ಜನರ ಕಷ್ಟವನ್ನು ಅರಿತರು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬಾಲಕ ನರೇಂದ್ರನ ಮೇಲೆ ಹಾವು ಹರಿದ ಪ್ರಸಂಗ ಯಾವುದು?

    Answer

    ಬಾಲಕ ನರೇಂದ್ರ ಕಣ್ಣುಮುಚ್ಚಿ ಚಿಂತನೆ ಮಾಡುತ್ತಿದ್ದಾಗ ಅವನ ಮೈಮೇಲೆ ಹಾವೊಂದು ಹರಿದು ಹೋಯಿತು. ಅವನ ಗೆಳೆಯರು ಇದನ್ನು ನೋಡಿ ಗಾಬರಿಯಾಗಿ ಓಡಿದರು. ನಂತರ ಅವರು ಬಂದು ನರೇಂದ್ರನಿಗೆ ವಿಷಯ ತಿಳಿಸಿದಾಗ ಅವನು ಭಯಪಡಲಿಲ್ಲ.

  2. ೨. ತೋಟದ ಮಾಲಿ ಮಕ್ಕಳಿಗೆ ಏನೆಂದು ಹೇಳಿದನು?

    Answer

    ತೋಟದ ಮಾಲಿ ಮಕ್ಕಳಿಗೆ ‘ಆ ಮರದಲ್ಲಿ ಭೂತ ಇದೆ. ನೀವು ಈಗಲೇ ಜಾಗ ಬಿಟ್ಟು ಹೋಗಿ, ಇಲ್ಲದಿದ್ದರೆ ನಿಮ್ಮನ್ನೆಲ್ಲ ನುಂಗಿಬಿಡುತ್ತದೆ’ ಎಂದು ಹೇಳಿದನು.

  3. ೩. ಡಾಯರ್‌ಸನ್‌ನನು ಏಕೆ ಬೆರಗಾದರು?

    Answer

    ಸ್ವಾಮಿ ವಿವೇಕಾನಂದರು ಪುಸ್ತಕದ ನೂರಾರು ಸಾಲುಗಳನ್ನು ಅದರಂತೆ ಉದಾಹರಿಸುತ್ತಿದ್ದುದನ್ನು ಕಂಡು ಡಾಯರ್‌ಸನ್ ಬೆರಗಾದರು. ಇದು ಹೇಗೆ ಸಾಧ್ಯ ಎಂದು ಅವರು ಕೇಳಿದರು.

  4. ೪. ಪ್ರಾಣಿಗಳ ಬಗ್ಗೆ ನರೇಂದ್ರನ ಅಭಿಪ್ರಾಯವೇನು?

    Answer

    ಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ ಎಂಬುದು ಪ್ರಾಣಿಗಳ ಬಗ್ಗೆ ನರೇಂದ್ರನ ಅಭಿಪ್ರಾಯವಾಗಿತ್ತು.

  5. ೫. ಭೂತದ ಬಗೆಗೆ ನರೇಂದ್ರನ ವಿಚಾರಗಳೇನು?

    Answer

    ಭೂತದ ಬಗ್ಗೆ ನರೇಂದ್ರನಿಗೆ ಭಯದ ಬದಲು ಕುತೂಹಲವಿತ್ತು. ಅವನು ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಭೂತವನ್ನು ಎದುರಿಸಲು ಸಿದ್ಧನಾದನು. ಕಾದು ಕಾದು ಭೂತ ಬರಲಿಲ್ಲವಾದ್ದರಿಂದ ಅದು ಹುಡುಗರನ್ನು ಓಡಿಸಲು ಮಾಲಿಯ ಉಪಾಯ ಎಂದು ಅರಿತನು.

ಇ) ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ.”

    Answer

    ಈ ಮಾತನ್ನು ಬಾಲಕ ನರೇಂದ್ರನು ತನ್ನ ಗೆಳೆಯರಿಗೆ ಹೇಳಿದನು.

  2. ೨. “ಭಯದ ಮಾತುಗಳನ್ನು ನಂಬಬಾರದು.”

    Answer

    ಈ ಮಾತನ್ನು ನರೇಂದ್ರನು ತನ್ನ ಗೆಳೆಯರಿಗೆ ಹೇಳಿದನು.

  3. ೩. “ಇದು ಹೇಗೆ ಸಾಧ್ಯ?”

    Answer

    ಈ ಮಾತನ್ನು ಡಾಯರ್‌ಸನ್ ಸ್ವಾಮಿ ವಿವೇಕಾನಂದರಿಗೆ ಹೇಳಿದರು.

  4. ೪. “ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ.”

    Answer

    ಈ ಮಾತನ್ನು ಸ್ವಾಮಿ ವಿವೇಕಾನಂದರು ಜನರಿಗೆ ಹೇಳಿದರು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಸ್ವಂತವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಸಿದ್ಧನಾಗು : ................................................................................

    Answer

    ಸಿದ್ಧನಾಗು: ನಾನು ನಾಳಿನ ಪರೀಕ್ಷೆಗೆ ಸಿದ್ಧನಾಗಿದ್ದೇನೆ.

  2. ೨. ಏಕಾಗ್ರತೆ : ................................................................................

    Answer

    ಏಕಾಗ್ರತೆ: ನಾನು ಪಾಠವನ್ನು ಏಕಾಗ್ರತೆಯಿಂದ ಕೇಳುತ್ತೇನೆ.

  3. ೩. ಕಣ್ಣುಚ್ಚಿ : ................................................................................

    Answer

    ಕಣ್ಣುಚ್ಚಿ: ನಾವು ಪ್ರಾರ್ಥನಾ ಸಮಯದಲ್ಲಿ ಕಣ್ಣುಚ್ಚಿ ನಿಲ್ಲುತ್ತೇವೆ.

  4. ೪. ಕುತೂಹಲ : ................................................................................

    Answer

    ಕುತೂಹಲ: ನನಗೆ ಹೊಸ ಕಥೆ ಕೇಳಲು ಕುತೂಹಲವಿದೆ.

  5. ೫. ಉಪಾಯ : ................................................................................

    Answer

    ಉಪಾಯ: ಇರುವೆಯನ್ನು ಓಡಿಸಲು ಅಣ್ಣ ಒಂದು ಉಪಾಯ ಮಾಡಿದ.

ಆ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ನರೇಂದ್ರನು ........................ ಮಾಡುತ್ತಿದ್ದಾಗ ಮೈಮೇಲೆ ಹಾವು ಹರಿದಾಡಿತು.

    Answer

    ನರೇಂದ್ರನು ಧ್ಯಾನ ಮಾಡುತ್ತಿದ್ದಾಗ ಮೈಮೇಲೆ ಹಾವು ಹರಿದಾಡಿತು.

  2. ಅ) ಧ್ಯಾನ

  3. ಕ) ಸ್ನಾನ

  4. ಬ) ಊಟ

  5. ಡ) ನಿದ್ದೆ

  6. ೨. ನರೇಂದ್ರನಿಗೆ ಭೂತದ ಬಗೆಗೆ ........................ ಇತ್ತು.

    Answer

    ನರೇಂದ್ರನಿಗೆ ಭೂತದ ಬಗೆಗೆ ಕುತೂಹಲ ಇತ್ತು.

  7. ಅ) ಅಂಜಿಕೆ

  8. ಕ) ಗೌರವ

  9. ಬ) ಕುತೂಹಲ

  10. ಡ) ಭಯ

  11. ೩. ನರೇಂದ್ರನು ನಾನು ........................ ಉರಿವ ಕೆಂಡವನ್ನು ನನ್ನ ಮೇಲಿಟ್ಟರೂ ಗೊತ್ತಾಗುವುದಿಲ್ಲ ಎಂದನು.

    Answer

    ನರೇಂದ್ರನು ನಾನು ಓದುವಾಗ ಉರಿವ ಕೆಂಡವನ್ನು ನನ್ನ ಮೇಲಿಟ್ಟರೂ ಗೊತ್ತಾಗುವುದಿಲ್ಲ ಎಂದನು.

  12. ಅ) ಓದುವಾಗ

  13. ಕ) ಮಾತಾಡುವಾಗ

  14. ಬ) ಬರೆಯುವಾಗ

  15. ಡ) ಕೇಳುವಾಗ

  16. ೪. ಶಕ್ತಿಯೇ ಜೀವನ; ದೌರ್ಬಲ್ಯವೇ ........................

    Answer

    ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ.

  17. ಅ) ಜನನ

  18. ಕ) ಮರಣ

  19. ಬ) ನಿಶಕ್ತಿ

  20. ಡ) ಮುಕ್ತಿ

ಇ) ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ : ಭಯ x ಅಭಯ

  2. ೧. ಕಷ್ಟ x ........................

    Answer

    ಕಷ್ಟ x ಸುಖ

  3. ೨. ಜನನ x ........................

    Answer

    ಜನನ x ಮರಣ

  4. ೩. ಕೀರ್ತಿ x ........................

    Answer

    ಕೀರ್ತಿ x ಅಪಕೀರ್ತಿ

  5. ೪. ಆಸೆ x ........................

    Answer

    ಆಸೆ x ನಿರಾಸೆ

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ಮಾದರಿ : ಕಣ್ಣುಚ್ಚಿ = ಕಣ್ಣು + ಮುಚ್ಚಿ

  2. ೧. ಹಾವೊಂದು = ........................

    Answer

    ಹಾವೊಂದು = ಹಾವು + ಒಂದು

  3. ೨. ನರೇಂದ್ರ = ........................

    Answer

    ನರೇಂದ್ರ = ನರ + ಇಂದ್ರ

  4. ೩. ನೂರಾರು = ........................

    Answer

    ನೂರಾರು = ನೂರು + ನೂರು

  5. ೪. ಹೀಗೆಂದರು = ........................

    Answer

    ಹೀಗೆಂದರು = ಹೀಗೆ + ಎಂದರು

ಉ) ಕೆಳಗೆ ನೀಡಿರುವ ಪದಗಳಲ್ಲಿ ವ್ಯಾಕರಣ ಶುದ್ಧ ಪದವನ್ನು ಸರಿ ಚಿಹ್ನೆಯಿಂದ ಗುರುತಿಸಿರಿ.

  1. ೧. ಹಾವು - ಆವು

    Answer

    ಹಾವು ✔

  2. ೨. ಓಡು - ಹೋಡು

    Answer

    ಓಡು ✔

  3. ೩. ಹುಡುಗ - ಉಡುಗ

    Answer

    ಹುಡುಗ ✔

  4. ೪. ಬಾರಥ - ಭಾರತ

    Answer

    ಭಾರತ ✔

  5. ೫. ಅಧಿತಿ - ಅತಿಥಿ

    Answer

    ಅತಿಥಿ ✔

ಪೂರಕ ಓದು :

  1. (ಈ ಹಾಡನ್ನು ಎಲ್ಲರೂ ಕೂಡಿ ಹಾಡಿರಿ ಹಾಗೂ ಪ್ರಸ್ತುತ ಗದ್ಯದಲ್ಲಿನ ವಿಚಾರಗಳೊಂದಿಗೆ ಇರುವ ಸಾಮ್ಯತೆಯನ್ನು ಗಮನಿಸಿರಿ.)

  2. ಸ್ವಾಮಿ ವಿವೇಕಾನಂದ

  3. ಭುವನೇಶ್ವರಿ ಕರುಣೆಯ ಕಂದ

  4. ವಿಶ್ವನಾಥದತ್ತರ ಪುತ್ರನು ಅಂದ

  5. ಪರಮಹಂಸರ ಶಿಷ್ಯನು ನರೇಂದ್ರ

  6. ಭಾರತ ಮಾತೆಗೆ ಕೀರುತಿ ತಂದ

  7. ಚಿಕಾಗೋ ಸಭೆಯಲ್ಲಿ ಭಾಗವಹಿಸಿದ

  8. ಸರ್ವಧರ್ಮಗಳ ಸಮನ್ವಯ ಸಾರಿದ

  9. ಮಾನವೀಯ ಪ್ರೀತಿಯ ಎತ್ತಿ ಹಿಡಿದ

  10. ಲೋಕಕ್ಕೆ ಬೆಳಕಾದ ಹೆಮ್ಮೆಯ ಕಂದ

  11. ಏಳಿರಿ, ಎದ್ದೇಳಿರಿ ಎಂದು ಧ್ವನಿಸಿದ

  12. ಯುವ ಜನಾಂಗಕ್ಕೆ ಸ್ಪೂರ್ತಿ ತುಂಬಿದ

  13. ನವಭಾರತ ಕಟ್ಟಲು ಕಹಳೆ ಊದಿದ

  14. ಭಾರತಾಂಬೆಯ ವೀರ ವಿವೇಕಾನಂದ

  15. - ಎಂ.ಜೆ. ದೇಶಪಾಂಡೆ

ಊ. ಈ ಕೆಳಗಿನ ಪ್ರಶ್ನೆಗೆ ನಿಮ್ಮದೇ ಮಾತುಗಳಲ್ಲಿ ಬರೆಯಿರಿ.

  1. ಬಾಲಕ ನರೇಂದ್ರನ ಜೀವನದಿಂದ ಕಲಿಯಬೇಕಾದ ವಿಚಾರಗಳಾವುವು?

    Answer

    ಬಾಲಕ ನರೇಂದ್ರನ ಜೀವನದಿಂದ ನಾವು ಧೈರ್ಯವಾಗಿರುವುದನ್ನು ಕಲಿಯಬೇಕು.

  2. ................................................................................

    Answer

    ಮೂಢನಂಬಿಕೆಗಳನ್ನು ನಂಬಬಾರದು ಎಂಬುದನ್ನು ಕಲಿಯಬೇಕು.

  3. ................................................................................

    Answer

    ಯಾವುದೇ ಕೆಲಸವನ್ನು ಏಕಾಗ್ರತೆಯಿಂದ ಮಾಡಬೇಕು ಎಂಬುದನ್ನು ಕಲಿಯಬೇಕು.

  4. ................................................................................

    Answer

    ಪ್ರಾಣಿಗಳ ತಂಟೆಗೆ ಹೋಗಬಾರದು ಎಂಬುದನ್ನು ಕಲಿಯಬೇಕು.

  5. ................................................................................

    Answer

    ಸತ್ಯವನ್ನು ಅರಿತುಕೊಳ್ಳುವ ಕುತೂಹಲ ನಮ್ಮಲ್ಲಿರಬೇಕು.

  6. ................................................................................

    Answer

    ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬೇಕು.

Interactive Lab