CRECT Education

Class 5 Kannada Second Language Lesson 9: Brave Women | KTBS – Learn the Story

Description

Learn the inspiring stories of R. Kalyamma and Badigera Seethamma from Class 5 KTBS Second Language Kannada Lesson 9, with key vocabulary practice.

ಗದ್ಯ (prose) · ಸಂಪಾದಿತ (Edited/Compiled)

ಪಠ್ಯFull text

**೧. ಆರ್. ಕಲ್ಯಾಣಮ್ಮ :** ಮಹಿಳೆಯರ ಮತ್ತು ಮಕ್ಕಳ ಏಳಿಗೆಗೆ ಮತ್ತೊಂದು ಹೆಸರು ಆರ್. ಕಲ್ಯಾಣಮ್ಮ. ಇವರು ಬೆಂಗಳೂರಿನವರು. ಇವರು ೧೮೯೧ ರಲ್ಲಿ ಜನಿಸಿದರು. ತಾಯಿ ಜಾನಕಮ್ಮ; ತಂದೆ ರಾಮಸ್ವಾಮಿ ಅಯ್ಯಂಗಾರ್. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು. ಓದುತ್ತಿರುವಾಗಲೇ ಮದುವೆಯಾಯಿತು. ಮೂರು ತಿಂಗಳೊಳಗೆ ಗಂಡನನ್ನು ಕಳೆದುಕೊಂಡರು. ಸಂಸಾರದ ಸುಂದರ ಕನಸು ಪುಡಿ ಪುಡಿಯಾಯಿತು. ದಿಕ್ಕು ತೋರದಂತಾಯಿತು. ಭವಿಷ್ಯವೇ ಬಿದ್ದುಹೋಯಿತು. ಆದರೂ ಎದೆಗುಂದಲಿಲ್ಲ. ಮನೆಯಲ್ಲಿಯೇ ಓದಿದರು. ಎಲ್.ಎಸ್.ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಕಾಲದಲ್ಲಿ ಇದೊಂದು ಸಾಹಸವೇ ಆಗಿತ್ತು. ಓದುವ ಆಸೆ ಬಹಳವಾಗಿತ್ತು. ಆದರೆ ಅನುಕೂಲತೆಯಿಂದ ಮುಂದೆ ಓದಲಾಗಲಿಲ್ಲ. ಆದರೂ ಮನೆಯಲ್ಲಿಯೇ ಓದು ಮುಂದುವರೆಸಿದರು. ಇದರಿಂದ ಅವರ ವಿಚಾರ ಶಕ್ತಿಗೆ ಹೊಸ ಹೊಳಪು ಬಂತು. ಅಬಲೆಯರ ದೀನತೆ ಮತ್ತು ಮಕ್ಕಳ ಶೋಷಣೆಯ ಬಗ್ಗೆ ಚಿಂತಿಸಿದರು. ಅಂತಹವರ ನೋವು-ಸಂಕಟಗಳನ್ನು ಪರಿಹರಿಸುವ ದಾರಿಯನ್ನು ಆರಿಸಿಕೊಂಡರು. ಅದಕ್ಕಾಗಿ "ಶ್ರೀ ಶಾರದಾ ಸ್ತ್ರೀ ಸಮಾಜ"ವನ್ನು ಕಟ್ಟಿದರು. ವಿಶೇಷ ತರಬೇತಿ ಆರಂಭಿಸಿದರು. ಹಣಕಾಸಿನ ಸಬಲತೆ ತಂದುಕೊಡಲು ದುಡಿದರು. ಬಾಲಕಿಯರಿಗೆ ಶಿಕ್ಷಣ ಕೊಡಲು ಶಾಲೆಗಳನ್ನು ಪ್ರಾರಂಭಿಸಿದರು. ಹೆಣ್ಣುಮಕ್ಕಳ ಸಮಸ್ಯೆಗಳನ್ನು ಚರ್ಚಿಸುವುದಕ್ಕೆ 'ಸರಸ್ವತಿ ಪತ್ರಿಕೆ'ಯನ್ನು ಹುಟ್ಟು ಹಾಕಿದರು. ಈ ಪತ್ರಿಕೆಯ ಕೆಲಪುಟಗಳನ್ನು ಮಕ್ಕಳಿಗೂ ಮೀಸಲಾಗಿರಿಸಿದರು. ಮಕ್ಕಳಿಗಾಗಿ "ಅಖಿಲ ಕರ್ನಾಟಕ ಮಕ್ಕಳ ಕೂಟ" ಕಟ್ಟಿದರು. ಸುತ್ತಮುತ್ತಲಿನ ಮಕ್ಕಳನ್ನು ಸೇರಿಸಿದರು. ಮಕ್ಕಳ ಆಶಯಕ್ಕೆ ತಕ್ಕಂತೆ ಕಥೆ ಕಟ್ಟಿದರು. ನಾಟಕ ರಚಿಸಿದರು. ಕುಣಿಸಿದರು. ಆಟವಾಡಿಸಿದರು. ಮಕ್ಕಳಿಗೆ ಹೊಸ ಲೋಕವನ್ನೇ ತೆರೆದರು. ಈ ಎಲ್ಲಾ ಕೆಲಸಗಳು ಅವರಿಗೆ ತೃಪ್ತಿ ತಂದವು. ಅನಾರೋಗ್ಯದಿಂದ ಬಳಲುತ್ತಿದ್ದರೂ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸಿದರು. ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ತನ್ನ ಕಷ್ಟಕೋಟಲೆಗಳನ್ನು ಬದಿಗಿಟ್ಟು ದುಡಿದ ಹಿರಿಯ ಜೀವಿ. ಇವರು ೧೯೬೫ ರಲ್ಲಿ ಮರಣ ಹೊಂದಿದರು. **೨. ಸ್ವಾತಂತ್ರ್ಯ ಹೋರಾಟಗಾರ್ತಿ ಬಡಿಗೇರ ಸೀತಮ್ಮ :** ಭಾರತಕ್ಕೆ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕ ದಿನ. ಅಂದು ತಿರಂಗಿ ಧ್ವಜವೇರಿಸಿ, "ವಂದೇ ಮಾತರಂ", "ಬೋಲೋ ಭಾರತ್ ಮಾತಾಕಿ ಜೈ" ಎಂದು ಘೋಷಣೆ ಮಾಡುತ್ತ ಸಿಹಿ ಹಂಚಿದ ದಿನ. ಕೋಟಿ ಕೋಟಿ ಜನರ ಕನಸು ನನಸಾದ ದಿನ. ಆದರೆ ಅಂದು ಭಾರತದೊಳಗಿನ ಹೈದ್ರಾಬಾದ ಸಂಸ್ಥಾನ ಮಾತ್ರ ಭಾರತದಲ್ಲಿ ವಿಲೀನವಾಗಲಿಲ್ಲ. ಇಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ನಿಷೇಧಿಸಲಾಗಿತ್ತು. ಇದರಿಂದ ಹೈದ್ರಾಬಾದ್ ಪ್ರಾಂತದ ಜನರು ನಿಜಾಮನ ವಿರುದ್ಧ ಸಿಡಿದೆದ್ದರು. ಆಗಿನ ಹೈದ್ರಾಬಾದ್ ಪ್ರಾಂತದಲ್ಲಿ ರಾಯಚೂರು ಜಿಲ್ಲೆಯೂ ಒಂದು. ಆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಜನ ಸೇರಿದರು. ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಬಂದರು. ಊರ ದೇವತೆ ಕೆಂಚವ್ವನ ಗುಡಿಯ ಬಯಲಿನಲ್ಲಿ ಭಾರತದ ತ್ರಿವರ್ಣ ಧ್ವಜವೇರಿಸಲು ನಿರ್ಧರಿಸಿದರು. ಸಿದ್ಧತೆ ಮಾಡಲು ಪ್ರಾರಂಭಿಸಿದರು. ಆ ಜನರ ಮಧ್ಯ ಇಪ್ಪತ್ತು ವರುಷದ ತರುಣಿ ಕುಣಿಯುತ್ತ ಬಂದಳು. ಎಡಗೈಯಲ್ಲಿ ಧ್ವಜ ಬಲಗೈಯಲ್ಲಿ ಕುಡಗೋಲು, ಅವಳು ಸಾಕ್ಷಾತ್ ಕಾಳಿಯಂತೆ ಕಾಣುತ್ತಿದ್ದಳು. ದುಂಡು ಮುಖ, ಹಣೆ ತುಂಬ ಕುಂಕುಮ, ಮೂಗಿನಲ್ಲಿ ನತ್ತು. ಕಚ್ಚೆ ಹಾಕಿದ ಇಳಕಲ್ಲ ಸೀರೆ, ಅವಳಲ್ಲಿ ಭಾವಾವೇಶ ತುಂಬಿತ್ತು. ಹಲಗೆ ಸಪ್ಪಳಕ್ಕೆ ರಣಭೈರವಿಯಂತೆ ಕುಣಿಯುತ್ತಿದ್ದಳು. ತಿರಂಗಿ ಧ್ವಜವನ್ನು ಅವಳೇ ಏರಿಸಿದಳು. ಜನ ಜೈ ಎಂದು ಘೋಷಿಸಿದರು. ಜೈ-ಹಿಂದ್ ಧ್ವನಿ ಎಲ್ಲೆಡೆ ಮೊಳಗಿತು. ಆ ಧ್ವಜವೇರಿಸಿದ ತರುಣಿಯೇ ಬಡಿಗೇರ ಸೀತಮ್ಮ. ತಂದೆ ಬಸಪ್ಪ ತಾಯಿ ಶ್ಯಾವಂತ್ರವ್ವ. ಊರು ಮಾಲಗತ್ತಿ. ಧ್ವಜವೇರಿಸುವ ಈ ಕಾರ್ಯಕ್ರಮ ತಡೆಯಲು ಬಂದ ಕೆಲವೇ ಪೊಲೀಸರು ಜನರನ್ನು ನೋಡಿ ದಂಗಾದರು. ಜನಜಂಗುಳಿಗೆ ಹೆದರಿ ಮೂಕಪ್ರೇಕ್ಷಕರಾದರು. ಮುಂದೆ ಈ ಹುಡುಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಳು. ಹೈದ್ರಾಬಾದ್ ಪ್ರಾಂತ ೧೯೪೮ ಸೆಪ್ಟೆಂಬರ್ ೧೭ ರಂದು ಭಾರತದಲ್ಲಿ ವಿಲೀನವಾಯಿತು. ಬಡಿಗೇರ ಸೀತಮ್ಮ ೭೦ ನೆಯ ವಯಸ್ಸಿನಲ್ಲಿ (೧೪.೦೧.೧೯೯೮) ಸ್ವಾತಂತ್ರ್ಯಜ್ಯೋತಿಯಲ್ಲಿ ವಿಲೀನವಾದಳು.

ಪದಗಳ ಅರ್ಥword meanings

KannadaPronunciationMeaning
ಅನಾರೋಗ್ಯರೋಗದಿಂದ ನರಳುವುದು
ಏಳಿಗೆಅಭಿವೃದ್ಧಿ; ಉನ್ನತಿ
ಘೋಷಣೆಗಟ್ಟಿಯಾದ ಕೂಗು
ದೀನತೆಬಡತನ ನಿಷೇಧ - ನಿರಾಕರಣೆ ಬಹಿಷ್ಕಾರ - ಹೊರಕ್ಕೆ ಹಾಕು
ವಿಚಾರಶಕ್ತಿಆಲೋಚನಾ ಶಕ್ತಿ ಸಬಲ - ಶಕ್ತಿವಂತ ಹಲಗೆ - ತಮಟೆ ಆಶಯ - ಆಸೆ; ಇಂಗಿತ
ಕಷ್ಟಕೋಟಲೆಕಷ್ಟಗಳ ಸರಮಾಲೆ
ದಂಗಾಗುಆಶ್ಚರ್ಯಪಡು ನತ್ತು - ಮೂಗುತಿ ಪುಡಿಪುಡಿಯಾಗು - ಚೂರುಚೂರಾಗು
ಭಾವಾವೇಶಉದ್ರೇಕ ವಿಲೀನ - ಐಕ್ಯವಾಗು; ಕಣ್ಮರೆಯಾಗು
ಸಿಡಿದೆಳುರೊಚ್ಚಿಗೇಳು; ಕೋಪಗೊಳ್ಳು
ಹುಟ್ಟುಹಾಕುಪ್ರಾರಂಭಿಸು

ಅಭ್ಯಾಸexercises from the textbook

Model answers — a guide, not the only correct wording. Check with your teacher.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಕಲ್ಯಾಣಮ್ಮ ಯಾರ ಏಳಿಗೆಗಾಗಿ ಚಿಂತಿಸಿದರು?

    Answer

    ಕಲ್ಯಾಣಮ್ಮನವರು ಅಬಲೆಯರ ಮತ್ತು ಮಕ್ಕಳ ಏಳಿಗೆಗಾಗಿ ಚಿಂತಿಸಿದರು.

  2. ೨. ಕಲ್ಯಾಣಮ್ಮನವರ ವಿಚಾರಶಕ್ತಿಗೆ ಹೇಗೆ ಹೊಳಪು ಬಂದಿತು?

    Answer

    ಮನೆಯಲ್ಲಿಯೇ ಓದು ಮುಂದುವರೆಸಿದ್ದರಿಂದ ಕಲ್ಯಾಣಮ್ಮನವರ ವಿಚಾರಶಕ್ತಿಗೆ ಹೊಸ ಹೊಳಪು ಬಂತು.

  3. ೩. ಹೈದ್ರಾಬಾದ್ ಪ್ರಾಂತ್ಯದ ಜನರು ನಿಜಾಮನ ವಿರುದ್ಧ ಏಕೆ ಸಿಡಿದೆದ್ದರು?

    Answer

    ಹೈದ್ರಾಬಾದ್ ಪ್ರಾಂತ್ಯದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ನಿಷೇಧಿಸಿದ್ದರಿಂದ ಜನರು ನಿಜಾಮನ ವಿರುದ್ಧ ಸಿಡಿದೆದ್ದರು.

  4. ೪. ಮಾಲಗತ್ತಿ ಗ್ರಾಮದ ಜನರು ಎಲ್ಲಿ ಧ್ವಜ ಏರಿಸಲು ನಿರ್ಧರಿಸಿದರು?

    Answer

    ಮಾಲಗತ್ತಿ ಗ್ರಾಮದ ಜನರು ಊರ ದೇವತೆ ಕೆಂಚವ್ವನ ಗುಡಿಯ ಬಯಲಿನಲ್ಲಿ ಧ್ವಜ ಏರಿಸಲು ನಿರ್ಧರಿಸಿದರು.

  5. ೫. ಹೈದರಾಬಾದ್ ಪ್ರಾಂತ್ಯ ಭಾರತದಲ್ಲಿ ಯಾವಾಗ ವಿಲೀನವಾಯಿತು?

    Answer

    ಹೈದರಾಬಾದ್ ಪ್ರಾಂತ್ಯ ೧೯೪೮ ಸೆಪ್ಟೆಂಬರ್ ೧೭ ರಂದು ಭಾರತದಲ್ಲಿ ವಿಲೀನವಾಯಿತು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಕಲ್ಯಾಣಮ್ಮ ಮಕ್ಕಳಿಗಾಗಿ ಯಾವ ಯಾವ ಕೆಲಸಗಳನ್ನು ಮಾಡಿದರು?

    Answer

    ಕಲ್ಯಾಣಮ್ಮನವರು ಮಕ್ಕಳಿಗಾಗಿ 'ಅಖಿಲ ಕರ್ನಾಟಕ ಮಕ್ಕಳ ಕೂಟ' ಕಟ್ಟಿದರು. ಮಕ್ಕಳನ್ನು ಸೇರಿಸಿ ಕಥೆ, ನಾಟಕ ರಚಿಸಿ, ಕುಣಿಸಿ, ಆಟವಾಡಿಸಿದರು. 'ಸರಸ್ವತಿ ಪತ್ರಿಕೆ'ಯಲ್ಲಿ ಮಕ್ಕಳಿಗಾಗಿ ಪುಟಗಳನ್ನು ಮೀಸಲಾಗಿರಿಸಿದರು.

  2. ೨. ಕಲ್ಯಾಣಮ್ಮನವರ ಜೀವನದಲ್ಲಿ ಬಂದು ಎರಗಿದ ಕಷ್ಟಗಳಾವುವು?

    Answer

    ಕಲ್ಯಾಣಮ್ಮನವರು ಓದುತ್ತಿರುವಾಗಲೇ ಮದುವೆಯಾಗಿ, ಮೂರು ತಿಂಗಳೊಳಗೆ ಗಂಡನನ್ನು ಕಳೆದುಕೊಂಡರು. ಇದರಿಂದ ಅವರ ಸಂಸಾರದ ಕನಸು ಪುಡಿಪುಡಿಯಾಯಿತು, ದಿಕ್ಕು ತೋರದಂತಾಯಿತು. ಅನಾರೋಗ್ಯದಿಂದಲೂ ಬಳಲುತ್ತಿದ್ದರು.

  3. ೩. ಧ್ವಜವೇರಿಸಲು ಬಂದ ಸೀತಮ್ಮನ ರೂಪವನ್ನು ವರ್ಣಿಸಿರಿ.

    Answer

    ಸೀತಮ್ಮ ಇಪ್ಪತ್ತು ವರ್ಷದ ತರುಣಿಯಾಗಿದ್ದು, ದುಂಡು ಮುಖ, ಹಣೆ ತುಂಬ ಕುಂಕುಮ, ಮೂಗಿನಲ್ಲಿ ನತ್ತು ಹೊಂದಿದ್ದಳು. ಕಚ್ಚೆ ಹಾಕಿದ ಇಳಕಲ್ಲ ಸೀರೆ ಉಟ್ಟು, ಎಡಗೈಯಲ್ಲಿ ಧ್ವಜ, ಬಲಗೈಯಲ್ಲಿ ಕುಡಗೋಲು ಹಿಡಿದು ಸಾಕ್ಷಾತ್ ಕಾಳಿಯಂತೆ ಕಾಣುತ್ತಿದ್ದಳು.

ಇ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.

  1. 'ಅ' ಪಟ್ಟಿ — 'ಬ' ಪಟ್ಟಿ

  2. ಅ) ಬಡಿಗೇರ ಸೀತಮ್ಮ — ೧) ಸರಸ್ವತಿ ಪತ್ರಿಕೆ

    Answer

    ಅ) ಬಡಿಗೇರ ಸೀತಮ್ಮ — ೪) ಸ್ವಾತಂತ್ರ್ಯ ಹೋರಾಟಗಾರ್ತಿ

  3. ಆ) ಶ್ಯಾವಂತ್ರವ್ವ — ೨) ರಾಮಸ್ವಾಮಿ ಅಯ್ಯಂಗಾರ್

    Answer

    ಆ) ಶ್ಯಾವಂತ್ರವ್ವ — ೩) ಬಸಪ್ಪ

  4. ಇ) ಜಾನಕಮ್ಮ — ೩) ಬಸಪ್ಪ

    Answer

    ಇ) ಜಾನಕಮ್ಮ — ೨) ರಾಮಸ್ವಾಮಿ ಅಯ್ಯಂಗಾರ್

  5. ಈ) ಆರ್. ಕಲ್ಯಾಣಮ್ಮ — ೪) ಸ್ವಾತಂತ್ರ್ಯ ಹೋರಾಟಗಾರ್ತಿ

    Answer

    ಈ) ಆರ್. ಕಲ್ಯಾಣಮ್ಮ — ೧) ಸರಸ್ವತಿ ಪತ್ರಿಕೆ

  6. — ೫) ನಿಜಾಮ

ಈ) ಬಿಟ್ಟ ಸ್ಥಳವನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ____________ ಭಾರತದಲ್ಲಿ ವಿಲೀನವಾಗಲಿಲ್ಲ.

    Answer

    ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ಭಾರತದಲ್ಲಿ ವಿಲೀನವಾಗಲಿಲ್ಲ.

  2. ಅ) ಹೈದ್ರಾಬಾದ್

  3. ಬ) ಸಿಕಂದರಾಬಾದ್

  4. ಕ) ಅಲಹಾಬಾದ

  5. ಡ) ಅಹಮದಾಬಾದ್

  6. ೨. ಆರ್.ಕಲ್ಯಾಣಮ್ಮನವರು ____________ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

    Answer

    ಆರ್.ಕಲ್ಯಾಣಮ್ಮನವರು ಎಲ್.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರು.

  7. ಅ) ಎಸ್.ಎಸ್.ಎಲ್.ಸಿ.

  8. ಬ) ಎಲ್.ಎಸ್.

  9. ಕ) ಪಿ.ಯು.ಸಿ.

  10. ಡ) ಬಿ.ಎ.

  11. ೩. ಕಲ್ಯಾಣಮ್ಮನವರು ಹುಟ್ಟುಹಾಕಿದ ಪತ್ರಿಕೆಯ ಹೆಸರು ____________

    Answer

    ಕಲ್ಯಾಣಮ್ಮನವರು ಹುಟ್ಟುಹಾಕಿದ ಪತ್ರಿಕೆಯ ಹೆಸರು ಸರಸ್ವತಿ ಪತ್ರಿಕೆ.

  12. ಅ) ಶಾರದಾ ಪತ್ರಿಕೆ

  13. ಬ) ಸರಸ್ವತಿ ಪತ್ರಿಕೆ

  14. ಕ) ಮಕ್ಕಳ ಬಾವುಟ

  15. ಡ) ಮಕ್ಕಳ ಕೂಟ

  16. ೪. ಬಡಿಗೇರ ಸೀತಮ್ಮನ ಊರು ____________

    Answer

    ಬಡಿಗೇರ ಸೀತಮ್ಮನ ಊರು ಮಾಲಗತ್ತಿ.

  17. ಅ) ಬೆಂಗಳೂರು

  18. ಬ) ಹೈದ್ರಾಬಾದ್

  19. ಕ) ಮಾಲಗತ್ತಿ

  20. ಡ) ಧಾರವಾಡ

III. ಭಾಷಾಭ್ಯಾಸ :

ಅ) ಮಾದರಿಯಂತೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ಮಾದರಿ : ಜಾಗ್ರತೆ x ಅಜಾಗ್ರತೆ

  2. ೧. ಅನುಕೂಲ x ____________

    Answer

    ಪ್ರತಿಕೂಲ

  3. ೨. ಅಬಲೆ x ____________

    Answer

    ಸಬಲೆ

  4. ೩. ಆರೋಗ್ಯ x ____________

    Answer

    ಅನಾರೋಗ್ಯ

  5. ೪. ನೀತಿ x ____________

    Answer

    ಅನೀತಿ

  6. ೫. ಉತ್ತೀರ್ಣ x ____________

    Answer

    ಅನುತ್ತೀರ್ಣ

ಆ) ಮಾದರಿ ವಾಕ್ಯಗಳನ್ನು ಗಮನಿಸಿ. ಅದೇ ರೀತಿ ಗೆರೆ ಹಾಕಿದ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಪ್ರವಾಹದಿಂದ ಜನ **ಕಷ್ಟಕೋಟಲೆ**ಗಳಿಗೆ ಒಳಗಾದರು.

    Model sentence

    ಪ್ರವಾಹದಿಂದ ಜನ ಕಷ್ಟಕೋಟಲೆಗಳಿಗೆ ಒಳಗಾದರು.

  2. ____________________________________________________________________

    Model sentence

    ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿ ನಮಗೆ ತುಂಬಾ ಕಷ್ಟಕೋಟಲೆ ಆಯಿತು.

  3. ೨. ನಾವು ಅನ್ಯಾಯದ ವಿರುದ್ಧ **ಸಿಡಿದೆಳ**ಬೇಕು.

    Model sentence

    ನಾವು ಅನ್ಯಾಯದ ವಿರುದ್ಧ ಸಿಡಿದೆಳಬೇಕು.

  4. ____________________________________________________________________

    Model sentence

    ತರಗತಿಯಲ್ಲಿ ಗಲಾಟೆ ನಡೆದಾಗ ಶಿಕ್ಷಕರು ಸಿಡಿದೆದ್ದರು.

  5. ೩. ಜೋಗ ಜಲಪಾತದ ಸೌಂದರ್ಯವನ್ನು ನೋಡಿ **ದಂಗಾದೆ**ನು.

    Model sentence

    ಜೋಗ ಜಲಪಾತದ ಸೌಂದರ್ಯವನ್ನು ನೋಡಿ ದಂಗಾದೆನು.

  6. ____________________________________________________________________

    Model sentence

    ಸರ್ಕಸ್ ಆಟ ನೋಡಿ ನಾನು ದಂಗಾದೆ.

  7. ೪. ಮೇಧಾ ಪಾಟ್ಕರ್ ನರ್ಮದಾ ಬಚಾವೋ ಆಂದೋಲನವನ್ನು **ಹುಟ್ಟುಹಾಕಿ**ದರು.

    Model sentence

    ಮೇಧಾ ಪಾಟ್ಕರ್ ನರ್ಮದಾ ಬಚಾವೋ ಆಂದೋಲನವನ್ನು ಹುಟ್ಟುಹಾಕಿದರು.

  8. ____________________________________________________________________

    Model sentence

    ನಮ್ಮ ಶಾಲೆಯಲ್ಲಿ ಹೊಸ ಓದುವ ಕೂಟವನ್ನು ಹುಟ್ಟುಹಾಕಿದರು.

  9. ೫. ವಿವೇಕಾನಂದರ ಲೇಖನಗಳನ್ನು ಓದಿ ಸುಭಾಷರು **ಭಾವಾವೇಶ**ಕ್ಕೆ ಒಳಗಾದರು.

    Model sentence

    ವಿವೇಕಾನಂದರ ಲೇಖನಗಳನ್ನು ಓದಿ ಸುಭಾಷರು ಭಾವಾವೇಶಕ್ಕೆ ಒಳಗಾದರು.

  10. ____________________________________________________________________

    Model sentence

    ಸ್ವಾತಂತ್ರ್ಯ ದಿನದಂದು ನನಗೆ ತುಂಬಾ ಭಾವಾವೇಶ ಉಂಟಾಯಿತು.

  11. ೬. ಕಲ್ಯಾಣಮ್ಮ ಮತ್ತು ಬಡಿಗೇರ ಸೀತಮ್ಮ **ಅಬಲೆ**ಯರಲ್ಲ ಸಬಲೆಯರು.

    Model sentence

    ಕಲ್ಯಾಣಮ್ಮ ಮತ್ತು ಬಡಿಗೇರ ಸೀತಮ್ಮ ಅಬಲೆಯರಲ್ಲ ಸಬಲೆಯರು.

  12. ____________________________________________________________________

    Model sentence

    ನಮ್ಮ ಅಮ್ಮ ಅಬಲೆಯರಲ್ಲ, ಅವರು ತುಂಬಾ ಸಬಲೆಯರು.

ಇ) ವಾಕ್ಯಗಳಲ್ಲಿ ಕಾಣುವ ಅರ್ಥ ವ್ಯತ್ಯಾಸವನ್ನು ತಿಳಿಯಿರಿ.

  1. ೧. ಕಲ್ಯಾಣಮ್ಮನವರು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು.

  2. ೨. ಕಲ್ಯಾಣಮ್ಮನವರು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುತ್ತಾರೆ.

  3. ೩. ಕಲ್ಯಾಣಮ್ಮನವರು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುವರು.

  4. ಇಂತಹ ಮೂರು ವಾಕ್ಯಗಳನ್ನು ನೀವು ರಚಿಸಿರಿ.

  5. ................................................................................................................

    Answer

    ನಾನು ಊಟ ಮಾಡಿದೆ.

  6. ................................................................................................................

    Answer

    ನಾನು ಊಟ ಮಾಡುತ್ತೇನೆ.

  7. ................................................................................................................

    Answer

    ನಾನು ಊಟ ಮಾಡುವೆ.

ಈ) ಕೆಳಗಿನ ಜೋಡಿ ಪದಗಳನ್ನು ಗಮನಿಸಿರಿ.

  1. ೧. ನೋವು ಸಂಕಟ

  2. ೨. ಕಷ್ಟಕೋಟಲೆ

  3. ೩. ಸುತ್ತಮುತ್ತ

  4. ೪. ಜನ ಜಂಗುಳಿ

ಪೂರಕ ಓದು :

  1. (ಕಿತ್ತೂರು ರಾಣಿ ಚೆನ್ನಮ್ಮನನ್ನು ಕುರಿತು ರಚಿತವಾಗಿರುವ ಈ ಕೆಳಗಿನ ಜನಪದ ಸಾಹಿತ್ಯವನ್ನು ಹಾಡಿರಿ ಹಾಗೂ ಪ್ರಸ್ತುತ ಗದ್ಯದಲ್ಲಿನ ವಿಚಾರಗಳೊಂದಿಗೆ ಇರುವ ಸಾಮ್ಯತೆಯನ್ನು ಗಮನಿಸಿರಿ.)

  2. ಕಿತ್ತೂರು ಚೆನ್ನಮ್ಮ ಸುತ್ತೂರು ಒಡತ್ಯಾಗಿ

  3. ಕತ್ತಿ ಕವಚಗಳ ಉಡುಪುಟ್ಟು । ಅಬ್ಬರದಿ

  4. ಬತ್ತಲಗುದರಿಯ ಜಿಗದಾಳೋ ॥

  5. – ತ್ರಿಪದಿ

  6. ಚಂಡಿಯೊ, ಚೌಡಿಯೊ, ಮಾರಿಯೊ, ಮಸಣಿಯೊ

  7. ಖಂಡಿತ ಮಾನವಳಿವಳಲ್ಲಾ ಪುಂಡ ರಕ್ಕಸರ

  8. ತರಿವಳು ಚಾಮುಂಡಿಯೇ ಇವಳು ಬೇರಲ್ಲಾ.

  9. – ಲಾವಣಿ

  10. ಕಿತ್ತೂರ ಕೋಟೆಯ ಸುತ್ತವರಿಯಿತ ಚಾಪ್ಲಿನ್ ದಂಡ

  11. ಕಿತ್ತೂರ ದಂಡ ಜಯಘೋಷ ಹೊರ ಚಿಂತ ಹರಹರ

  12. ಮಹಾದೇವಂದ.... ಕೋಲ

  13. ಭರತ ಖಂಡದೊಳಗ ಮೊದಲ ಕಿತ್ತೂರ ರಾಜ್ಯ

  14. ಪರಸತ್ತೆಯ ಕಿತ್ತೆಸೆಯಾಕ ಕದನ ಹೂಡಿತ....ಕೋಲ

  15. – ಕೋಲು ಪದ

Interactive Lab

ಅನಾರೋಗ್ಯರೋಗದಿಂದ ನರಳುವುದು
ಏಳಿಗೆಅಭಿವೃದ್ಧಿ; ಉನ್ನತಿ
ಘೋಷಣೆಗಟ್ಟಿಯಾದ ಕೂಗು
ದೀನತೆಬಡತನ ನಿಷೇಧ - ನಿರಾಕರಣೆ ಬಹಿಷ್ಕಾರ - ಹೊರಕ್ಕೆ ಹಾಕು
ವಿಚಾರಶಕ್ತಿಆಲೋಚನಾ ಶಕ್ತಿ ಸಬಲ - ಶಕ್ತಿವಂತ ಹಲಗೆ - ತಮಟೆ ಆಶಯ - ಆಸೆ; ಇಂಗಿತ
ಕಷ್ಟಕೋಟಲೆಕಷ್ಟಗಳ ಸರಮಾಲೆ
ದಂಗಾಗುಆಶ್ಚರ್ಯಪಡು ನತ್ತು - ಮೂಗುತಿ ಪುಡಿಪುಡಿಯಾಗು - ಚೂರುಚೂರಾಗು
ಭಾವಾವೇಶಉದ್ರೇಕ ವಿಲೀನ - ಐಕ್ಯವಾಗು; ಕಣ್ಮರೆಯಾಗು
ಸಿಡಿದೆಳುರೊಚ್ಚಿಗೇಳು; ಕೋಪಗೊಳ್ಳು
ಹುಟ್ಟುಹಾಕುಪ್ರಾರಂಭಿಸು