CRECT Education

Class 6 Kannada Lesson 20: ಹುಚ್ಚು ಹುರುಳು (Mad Vigor) – Practice & Quiz

Description

Practice comprehension questions and fun word games from the humorous story 'ಹುಚ್ಚು ಹುರುಳು' by Beechi. Class 6 First Language Kannada.

ಗದ್ಯ (prose) · ಬೀಚಿ

ಪಠ್ಯFull text

('ಬೀಚಿ'ಯವರ 'ಹುಚ್ಚು ಹುರುಳು' ನಗೆ ಬರಹದಿಂದ ಆಯ್ದ ಭಾಗ) (೧) ಕರ್ನಾಟಕದಲ್ಲೊಂದೂರು. ದಿನಾಂಕ : ದಸರೆಯ ಮುಂದೊಂದು. ಮಾನ್ಯರೆ, ಅನಂತ ಪ್ರಣಾಮಗಳು. ಪ್ರತಿ ವರ್ಷದಂತೆ ಈ ವರ್ಷವೂ ನಮ್ಮೂರಲ್ಲಿ ಮುಂಬರುವ ದಸರೆಯಲ್ಲಿ ನಾಡಹಬ್ಬದ ಕಾರ್ಯಕ್ರಮವನ್ನು ನಡೆಸಬೇಕೆಂದು ನಿರ್ಧರಿಸಿದ್ದೇವೆ. ತಮ್ಮಂತಹ ಸುಪ್ರಸಿದ್ಧ ಸಾಹಿತಿಗಳು ಸಹಕರಿಸಿ ಸಹಾಯ ಮಾಡದಿದ್ದಲ್ಲಿ ನಮ್ಮ ನಿರ್ಧಾರವು ಫಲಕಾರಿಯಾಗಲು ಸಾಧ್ಯವೇ ಇಲ್ಲ. ತಾವು ಕೃಪೆಮಾಡಿ ನಮ್ಮ ಈ ಕರೆಗೆ ಓಗೊಟ್ಟು ಬಂದು ಭಾಗವಹಿಸಿ ಇಲ್ಲಿಯ ಪುರಜನರಿಗೆ ತಮ್ಮ ಭಾಷಣದಿಂದ ಜ್ಞಾನಾಮೃತ ಪಾನ ಮಾಡಿಸುವಿರೆಂದು ನಂಬುತ್ತೇವೆ. ತಮಗೆ ಅನುಕೂಲವಾಗುವ ದಿನವನ್ನೂ, ತಮ್ಮ ಭಾಷಣದ ವಿಷಯವನ್ನೂ ಆದಷ್ಟು ಜಾಗ್ರತೆ ತಿಳಿಸಿದರೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲು ಅನುಕೂಲವಾಗುತ್ತದೆ. ನಿಮ್ಮ ಉತ್ತರದ ಹಾದಿಯನ್ನು ಕಾಯುತ್ತಿದ್ದೇನೆ, ಇತಿ ನಿಮ್ಮವ, ಕಾರ್ಯದರ್ಶಿ, ನಾಡಹಬ್ಬ ಸಮಿತಿ. *** (೨) ಕನ್ನಡ ಭಾಷಣಕಾರರು ಕನ್ನಡ ಭಾಷಣಕಾರರೂರು ದಿನಾಂಕ || ಎರಡು ದಿನಗಳ ನಂತರ ನಾಡಹಬ್ಬ ಸಮಿತಿಯ ಕಾರ್ಯದರ್ಶಿಗಳಿಗೆ- ನಿಮ್ಮ ಪತ್ರವು ಕೈ ಸೇರಿತು. ಅಯ್ಯೋ! ನೀವು ಮಾಡುತ್ತಿರುವ ಕನ್ನಡಮಾತೆಯ ಸೇವೆಯಲ್ಲಿ ನಾನು ಸಹಕರಿಸಿ, ಸೇವೆ ಮಾಡಲು ಎಂದಾದರೂ ಆಗದು ಅಂದೆನೆಯೇ? ನನ್ನ ಅಲ್ಪ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧನಿದ್ದೇನೆ. ನಿಮ್ಮ ಅಪ್ಪಣೆಯನ್ನು ಮೀರಲು ಸಾಧ್ಯವೇ ಸ್ವಾಮೀ ನನ್ನಿಂದ? ನನ್ನ ಭಾಷಣವನ್ನು ಅಗತ್ಯವಾಗಿ ...... ದಿನಾಂಕದಂದು ಏರ್ಪಡಿಸಿಬಿಡಿ. ಚಿಕ್ಕದೊಂದು ವ್ಯಾವಹಾರಿಕ ವಿಷಯ. ಇಂದಿನ ರೈಲ್ವೆ ಪ್ರವಾಸದ ತೊಂದರೆ ನಿಮಗೆ ತಿಳಿಯದೆ ಇಲ್ಲ. ಎರಡನೆಯ ದರ್ಜೆ ಪ್ರವಾಸವಂತೂ ಸಾಧ್ಯವೇ ಇಲ್ಲ. ಅದಲ್ಲದೆ ನನ್ನಂತಹ ಪ್ರಸಿದ್ಧ ಪ್ರಖ್ಯಾತ ಪುರುಷನ ಸ್ಥಾನಮಾನಕ್ಕೆ ಗೌರವವೂ ಇಲ್ಲ ಅನ್ನಿ. ಕಾರಣ ಕನಿಷ್ಠಪಕ್ಷ ನೀವು ಮೊದಲನೆಯ ವರ್ಗದ ವೆಚ್ಚವನ್ನು ಭರಿಸುವುದಾದರೆ ಮಾತ್ರ ಬರಲು ಅನುಕೂಲ. ನಿಷ್ಠುರವಾಗಿ ತಿಳಿಸಿದ್ದೇನೆಂದು ಬೇರೆ ಏನೂ ತಿಳಿಯಬೇಡಿರಿ. ಇನ್ನೊಂದು ಚಿಕ್ಕ ಮಾತು, ನನ್ನ ಮೂರನೆಯ ಮಗು -ಅವನಿಗೆ ರೈಲಿನಲ್ಲಿ ಅರ್ಧ ಚಾರ್ಜು ಮಾತ್ರ-ನನ್ನನ್ನು ಅರಗಳಿಗೆಯೂ ಬಿಟ್ಟಿರಲರಿಯನು. ಅನಿವಾರ್ಯವಾಗಿ ಅವನನ್ನೂ ನನ್ನೊಟ್ಟಿಗೆ ಕರೆತರಬೇಕಾಗಿದೆ. ನಿಮಗೆ ಅದೇನು ಮಹಾ ವೆಚ್ಚ ಬಿಡಿ, ಅನ್ಯಥಾ ಭಾವಿಸಬೇಡಿರಿ. ನಿಸ್ವಾರ್ಥ ಬುದ್ಧಿಯಿಂದ ಸೇವೆಗೈಯುವ, ........................ *** (೩) ಕರ್ನಾಟಕದಲ್ಲೊಂದೂರು. ದಿನಾಂಕ|| ಮೂರು ದಿನಗಳ ನಂತರ. ಮಹನೀಯರೇ ಆಯಿತು. ಮೊದಲನೆಯ ವರ್ಗದ ಪ್ರಯಾಣದ ಖರ್ಚನ್ನು ಮತ್ತು ನಿಮ್ಮ ಮೂರನೆಯ ಮಗನ ಅರ್ಧ ಖರ್ಚನ್ನು ಭರಿಸಲು ನಮ್ಮ ಸಮಿತಿಯನ್ನು ಒಪ್ಪಿಸಿದ್ದೇನೆ. ನೀವು ಸೂಚಿಸಿದಂತೆ ................... ದಿನಾಂಕದಂದು ನಿಮ್ಮ ಭಾಷಣ ಏರ್ಪಡಿಸುತ್ತೇವೆ. ಅಂದಹಾಗೆ ನಿಮ್ಮ ಭಾಷಣದ ವಿಷಯ ತಿಳಿಸಲೇ ಇಲ್ಲ. ದಯವಿಟ್ಟು ತಿಳಿಸುವಿರಾ? ಇಂತು ಬೇಡುವ, ....................... ಕಾರ್ಯದರ್ಶಿ, ನಾಡಹಬ್ಬ ಸಮಿತಿ. *** (೪) ಕನ್ನಡ ಭಾಷಣಕಾರರು ಕನ್ನಡಭಾಷಣಕಾರರೂರು ದಿನಾಂಕ|| ಎರಡು ದಿನಗಳ ಅನಂತರ ನಾಡಹಬ್ಬ ಸಮಿತಿಯ ಕಾರ್ಯದರ್ಶಿ ಗೆಳೆಯರೆ- ಎಷ್ಟು ಮರೆವು ನೋಡಿ ನನಗೆ? ನನ್ನ ವಿಚಾರ ಹೇಳುವ ಭರದಲ್ಲಿ ವಿಷಯವನ್ನು ಮರೆತಿದ್ದೆ. ನಾನು ಮನೆಯಿಂದ ಟ್ಯಾಕ್ಸಿಯಲ್ಲಿ ಹೊರಟು, ನಿಮ್ಮೂರಲ್ಲಿ ನೀವು ಏರ್ಪಡಿಸುವ ಬಿಡಾರ ಮುಟ್ಟುವವರೆಗೂ ಬರೀ ಚಿಲ್ಲರೆ ಖರ್ಚೇ ಹೇರಳವಾಗಿ ಬರುತ್ತೆ ಕಣ್ರೀ, ಕೂಲಿ ಅನ್ನಿ ಇನ್ನೊಂದು ಅನ್ನಿ. ಪ್ರವಾಸದಲ್ಲಿ ಹಣ್ಣು-ಹಂಪಲುಗಳನ್ನು ತಿನ್ನುವ ಅಭ್ಯಾಸ ಬೇರೆ. ಅದರ ಖರ್ಚಿನ ..........ರೂಪಾಯಿಗಳನ್ನು ತಾವು ನನಗೆ ಕೊಡಬೇಕಾಗುತ್ತಲ್ಲ? ನಿಮ್ಮ ಅನುಕೂಲವನ್ನು ತಿಳಿಸಿಬಿಡಿ. ನಿರ್ದಾಕ್ಷಿಣ್ಯವಾಗಿ ಬರೆದುದಕ್ಕೆ ಬೇಸರಪಡಬೇಡಿ ಹೋ, ಅಂದ ಹಾಗೆ ನನ್ನ ಭಾಷಣದ ವಿಷಯ 'ನಮ್ಮ ಆರ್ಥಿಕ ದುಃಸ್ಥಿತಿ' ನಿಮ್ಮ ಜ್ಞಾನಾಮೃತಕ್ಕಾಗಿ ಹಾತೊರೆದ ಭಾಷಣಕಾರ ........................ *** (೫) ಕರ್ನಾಟಕದಲ್ಲೊಂದೂರು. ದಿನಾಂಕ|| ಮೂರು ದಿನಗಳ ಅನಂತರ. ಮಹನೀಯರೇ ತಾವು ದಯವಿಟ್ಟು ಹೊರಡಬೇಡಿ; ತಮ್ಮ ಭಾಷಣದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಕಾರಣ “ ನಮ್ಮ ಆರ್ಥಿಕ ದುಃಸ್ಥಿತಿ” ತಮ್ಮ ಭಾಷಣಾಮೃತವನ್ನು ಸವಿಯುವ ಪುಣ್ಯವಿಲ್ಲದ ನಿರ್ಭಾಗ್ಯ ಕಾರ್ಯದರ್ಶಿ. ನಾಡಹಬ್ಬ ಸಮಿತಿ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ೧. ಮೊದಲನೆಯ ಪತ್ರದಲ್ಲಿ ಭಾಷಣಕಾರರು ಯಾವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ?

    Answer

    ಮೊದಲನೆಯ ಪತ್ರದಲ್ಲಿ ಭಾಷಣಕಾರರು ರೈಲ್ವೆ ಪ್ರವಾಸದ ತೊಂದರೆಯನ್ನು ಹೇಳಿ, ಮೊದಲನೆಯ ವರ್ಗದ ಪ್ರಯಾಣದ ಖರ್ಚನ್ನು ಭರಿಸಬೇಕೆಂದು ಕೇಳಿಕೊಳ್ಳುತ್ತಾರೆ.

  2. ೨. ಭಾಷಣಕಾರರ ಭಾಷಣದ ವಿಷಯವೇನು?

    Answer

    ಭಾಷಣಕಾರರ ಭಾಷಣದ ವಿಷಯ 'ನಮ್ಮ ಆರ್ಥಿಕ ದುಃಸ್ಥಿತಿ' ಆಗಿದೆ.

  3. ೩. ಭಾಷಣಕಾರರಿಗೆ ಪತ್ರ ಬರೆದವರು ಯಾರು?

    Answer

    ಭಾಷಣಕಾರರಿಗೆ ಪತ್ರ ಬರೆದವರು ನಾಡಹಬ್ಬ ಸಮಿತಿಯ ಕಾರ್ಯದರ್ಶಿಗಳು.

  4. ೪. ಭಾಷಣಕಾರರ ಭಾಷಣ ರದ್ದು ಪಡಿಸಲು ಕಾರಣವೇನು?

    Answer

    ಭಾಷಣಕಾರರ ಭಾಷಣ ರದ್ದು ಪಡಿಸಲು ಕಾರಣ ಅವರ ಭಾಷಣದ ವಿಷಯ 'ನಮ್ಮ ಆರ್ಥಿಕ ದುಃಸ್ಥಿತಿ' ಆಗಿತ್ತು.

  5. ೫. ಭಾಷಣಕಾರರ ಸಮಸ್ಯೆಗೆ ಕಾರ್ಯದರ್ಶಿಗಳ ಕೊನೆಯ ಉತ್ತರವೇನು?

    Answer

    ಕಾರ್ಯದರ್ಶಿಗಳ ಕೊನೆಯ ಉತ್ತರದಲ್ಲಿ, ಭಾಷಣಕಾರರು ಹೊರಡಬೇಡಿ ಎಂದು ಹೇಳಿ, ಅವರ ಭಾಷಣದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

Interactive Lab