ಪದ್ಯ (poem) · ಸಿ. ಎಂ. ಗೋವಿಂದರೆಡ್ಡಿ
ಪಠ್ಯFull text
**ಶುಭ ನುಡಿ** * ಕನಸುಗಳನ್ನು ಕಟ್ಟಬೇಕು. ಅವುಗಳನ್ನು ನನಸು ಮಾಡಬೇಕು. * ಅಪರಿಚಿತವಾಗಿರುವುದನ್ನು ಅರಿಯಬೇಕು. ಅದು ಪರಿಚಿತವಾಗುತ್ತದೆ. * ಕಗ್ಗಲ್ಲಿನಲ್ಲಿ ಸುಂದರ ಮೂರ್ತಿಗಳು ಅರಳುತ್ತವೆ. (Dream dreams and make them come true. Understand the unknown, and it becomes known. Beautiful idols bloom even in hard stone.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಆಗಸ | — | ಆಕಾಶ, ಗಗನ |
| ಇಷ್ಟ | — | ಇಚ್ಛೆ, ಮೆಚ್ಚುಗೆ |
| ರೆಕ್ಕೆ | — | ಹಕ್ಕಿಗಳ ಪುಕ್ಕ, ಗರಿ |
| ಒಡಲು | — | ಶರೀರ, ಹೊಟ್ಟೆ |
| ಸಾಗು | — | ಚಲಿಸು, ಮುಂದೆ ಹೋಗು |
| ಮಡಿಲು | — | ಉಡಿ |
| ಧರೆ | — | ನೆಲ, ಭೂಮಿ |
| ಹೆಬ್ಬಂಡೆ | — | ದೊಡ್ಡದಾದ ಬಂಡೆ, ವಿಸ್ತಾರವಾದ ಕಲ್ಲು |
| ಬರ | — | ಬರಗಾಲ, ಕ್ಷಾಮ |
| ಅಳಿ | — | ಸಾಯು, ನಾಶಹೊಂದು |
| ಗತಿ | — | ಸ್ಥಿತಿ, ದಾರಿ |
| ಬಯಲು | — | ಅಂಗಳ, ಮೈದಾನ |
| ಉಳಿಸು | — | ರಕ್ಷಿಸು, ಕಾಪಾಡು |
| ನೆಡು | — | ನಾಟು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಬಿಟ್ಟ ಸ್ಥಳವನ್ನು ತುಂಬಿರಿ.
೧. ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ _____________ಬಂದಿತ್ತು.
Answerಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆಯು ಬಂದಿತ್ತು.
೨. ಹಾರುತ ತೇಲುತ ಮುಂದಕೆ ಸಾಗಿ ಚಂದ್ರನ _____________ಸೇರಿದಳು.
Answerಹಾರುತ ತೇಲುತ ಮುಂದಕೆ ಸಾಗಿ ಚಂದ್ರನ ಮಡಿಲನು ಸೇರಿದಳು.
೩. ಪುಟ್ಟಿಯೇ, ನಮ್ಮೀ ಮಂಗಳಗ್ರಹದ ದುರಂತ _____________ಕೇಳಿ ತಿಳಿ.
Answerಪುಟ್ಟಿಯೇ, ನಮ್ಮೀ ಮಂಗಳಗ್ರಹದ ದುರಂತ ಕಥೆಯನ್ನು ಕೇಳಿ ತಿಳಿ.
೪. ಹಸಿರನು ಅಳಿಸದೆ ಗಿಡಮರ ಬೆಳೆಸಿ ಉಳಿಸುವೆವೆಂದಳು ಈ _____________
Answerಹಸಿರನು ಅಳಿಸದೆ ಗಿಡಮರ ಬೆಳೆಸಿ ಉಳಿಸುವೆವೆಂದಳು ಈ ಧರೆಯ.
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಪುಟ್ಟಿಗೆ ಯಾರ ಹಾಗೆ ಹಾರುವ ಮನಸ್ಸಿತ್ತು?
Answerಪುಟ್ಟಿಗೆ ಹಕ್ಕಿಯ ಹಾಗೆ ಹಾರುವ ಮನಸ್ಸಿತ್ತು.
೨. ಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಎಲ್ಲಿಗೆ ಸೇರಿದಳು?
Answerಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಮಂಗಳ ಗ್ರಹಕ್ಕೆ ಸೇರಿದಳು.
೩. ಪುಟ್ಟಿ ಯೋಗಿಗೆ ಏನೆಂದು ಕೇಳಿದಳು?
Answerಪುಟ್ಟಿ ಯೋಗಿ ಹೆಸರಿನ ಹೆಬ್ಬಂಡೆಗೆ ‘ನೀನು ಹೇಗೆ ಇಲ್ಲಿಗೆ ಬಂದೆ?’ ಎಂದು ಕೇಳಿದಳು.
೪. ಮಂಗಳ ಗ್ರಹದಲ್ಲಿ ಬರ ಏಕೆ ಬಂದಿತು?
Answerಮಂಗಳ ಗ್ರಹದಲ್ಲಿ ಜನತೆಯು ಮರಗಳನ್ನು ಕಡಿದಿದ್ದರಿಂದ ಬರ ಬಂದಿತು.
೫. ಪುಟ್ಟಿ ಜನರಲ್ಲಿ ಏನನ್ನು ಉಳಿಸಲು ಬೇಡಿದಳು?
Answerಪುಟ್ಟಿ ಜನರಲ್ಲಿ ಹಸಿರನ್ನು ಉಳಿಸಲು ಬೇಡಿದಳು.
ಇ. ಪದ್ಯಭಾಗವನ್ನು ಪೂರ್ಣಗೊಳಿಸಿರಿ.
೧. ಆಗಸದಲ್ಲಿ_____________________
Answerಹಾರುವುದೆಂದರೆ
_____________________________
Answerಪುಟಾಣಿ ಪುಟ್ಟಿಗೆ ಬಲು ಇಷ್ಟ
_____________________________
Answerರೆಕ್ಕೆಗಳಿಲ್ಲದೆ ಹಾರಲು ಹೋದರೆ
_________________ಇದು ಕಷ್ಟ.
Answerಆಗದೆ ತೊಂದರೆ?
೨. ಮಳೆಬೆಳೆ______________________
Answerಕಾಣದೆ ಜೀವಿಯು ಅಳಿದು
_____________________________
Answerಬಂದಿತು ನಮಗೆ ಇಂಥ ಸ್ಥಿತಿ
_____________________________
Answer‘ನಿಮ್ಮ ಭೂಮಿಯಲಿ ಗಿಡಮರ ಅಳಿದರೆ
_________________ಇದೇ ಗತಿ.
Answerಮುಂದೆ ಒಂದು ದಿನ
ಈ. ಸಿ.ಎಂ.ಗೋವಿಂದರೆಡ್ಡಿಯವರ ಸ್ಥಳ, ಕಾಲ, ಕೃತಿಗಳ ವಿವರ ತಿಳಿಸಿರಿ.
ಉ. ನಾಮಪದ, ನಾಮಪ್ರಕೃತಿ ಮತ್ತು ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ ಬರೆಯಿರಿ.
೧. ಗಗನ + ಅನ್ನು = ಗಗನವನ್ನು
೨. ಶಾಲೆ + ಇಂದ = ಶಾಲೆಯಿಂದ
ಊ. ಕೊಟ್ಟಿರುವ ವಾಕ್ಯಗಳಲ್ಲಿರುವ ಗುಣವಾಚಕ(ವಿಶೇಷಣ)ಗಳನ್ನು ಗುರುತಿಸಿರಿ.
ಉದಾ: ವಿವೇಕನಿಗೆ ಅಪಾರ ಬುದ್ಧಿವಂತಿಕೆಯಿದೆ. - ಅಪಾರ
೧. ರಫೀಕ್‌ನದು ದೊಡ್ಡಮನೆ. _________________________
೨. ಅವಳಿಗೆ ಹಸಿರು ಬಣ್ಣ ಇಷ್ಟ. _________________________
೩. ಪುಟ್ಟಿಯು ಕಂಡಳು ಕೆಂಪು ಬಂಡೆಯನು. _________________________
ಋ. ಕೊಟ್ಟಿರುವ ವಾಕ್ಯಗಳಲ್ಲಿ ಸಂಖ್ಯಾವಾಚಕಗಳನ್ನು ಗುರುತಿಸಿ ಬರೆಯಿರಿ.
೧. ಡೇವಿಡ್‌ನ ಊರಿನಲ್ಲಿ ನೂರು ಹಸುಗಳಿವೆ. _________________________
೨. ಪೂರ್ಣಚಂದ್ರನು ಬೆಳಿಗ್ಗೆ ಐದು ಗಂಟೆಗೆ ಏಳುತ್ತಾನೆ. _________________________
೩. ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆಯು ಬಂದಿತ್ತು. _________________________
ಎ. ಕೊಟ್ಟಿರುವ ಸನ್ನಿವೇಶ/ ಘಟನೆಯನ್ನು ಬೇರೆಯವರಿಂದ ಓದಿಸಿರಿ. ಚೆನ್ನಾಗಿ ಆಲಿಸಿರಿ. ಕೊಟ್ಟಿರುವ ಪ್ರಶ್ನೆಗೆ ಉತ್ತರಿಸಿರಿ.
ಚಾರ್ಲ್ಸ್ ಡಾರ್ವಿನ್‌ನ ಮೊಮ್ಮಕ್ಕಳು ಒಂದು ಸಲ ತಮ್ಮ ತಾತನನ್ನು ಕೀಟಲೆ ಮಾಡುವುದಕ್ಕಾಗಿ ಒಂದು ಹೊಟ ಹೂಡಿದರು. ಒಂದು ಜೇರುಂಡೆಯನ್ನು ಹಿಡಿದು ತಂದು ಅದರ ರೆಕ್ಕೆಗಳನ್ನು ಕಿತ್ತು ಹಾಕಿದರು. ಅದಕ್ಕೆ ಚಿಟ್ಟೆಯೊಂದರ ರೆಕ್ಕೆಗಳನ್ನು ಅಂಟಿಸಿದರು. ಅಂಟಿಸುವಿಕೆಯನ್ನು ಬಹಳ ಚತುರತೆಯಿಂದ ಮಾಡಿದ್ದರಿಂದ ಅದು ಒಂದು ನೈಜವಾದ ಆದರೆ ಅಪರೂಪವಾದ ಕೀಟದಂತೆ ಕಾಣುತ್ತಿತ್ತು. ಅದನ್ನು ಅವರು ಡಾರ್ವಿನ್‌ನ ಬಳಿಗೆ ಕೊಂಡೊಯ್ದು “ತಾತ, ಇದು ಯಾವ ಜಾತಿಯ ಕೀಟ?” ಎಂದು ಕೇಳಿದರು. ಡಾರ್ವಿನ್ನರು ಅದನ್ನು ಒಂದು ನಿಮಿಷ ಪರೀಕ್ಷಿಸಿ ನೋಡಿ “ಒಂದು ಹೊಸ ಕೀಟ ಜಾತಿಯನ್ನೇ ಪತ್ತೆ ಮಾಡಿ ಬಿಟ್ಟಿದ್ದೀರಲ್ಲ, ತುಂಬಾ ಸಂತೋಷ. ಇದು ನಿಮಗೆ ಎಲ್ಲಿ ಸಿಕ್ಕಿತು? ನೀವು ನೋಡಿದಾಗ ಇದು ಏನು ಮಾಡುತ್ತಿತ್ತು?” ಎಂದು ಕೇಳಿದರು. ತಾತ ನಮ್ಮ ಬಲೆಗೆ ಬಿದ್ದರೆಂದು ಬಹು ಸಂತೋಷಪಟ್ಟ ಆ ಮಕ್ಕಳು “ನಮ್ಮ ಮನೆಯ ಹಿತ್ತಲ ತೋಟದಲ್ಲಿ ಸಿಕ್ಕಿತು. ಗಿಡದ ಎಲೆಯ ಮೇಲೆ ಕುಳಿತಿತ್ತು. ನಾವು ನೋಡಿದಾಗ ಇದು ಹಮ್ ಮಾಡುತ್ತಿತ್ತು (ಗುಂಯ್‌ಗುಡು)” ಎಂದರು. ಅದಕ್ಕೆ ಡಾರ್ವಿನ್ನರು “ಓಹೋ, ಸರಿ ಮತ್ತೆ ಹಾಗಾದರೆ ಇದು ಹಮ್‌ಬಗ್” (ಹಮ್‌ಬಗ್=ಗುಂಯ್‌ಗುಡುವ ಹುಳು) ಎಂದರು.
ಪ್ರಶ್ನೆಗಳು:
೧. ಡಾರ್ವಿನ್ನರು ಹೊಸ ಕೀಟವನ್ನು ‘ಹಮ್‌ಬಗ್’ ಎಂದು ಏಕೆ ಕರೆದರು?
Answerಡಾರ್ವಿನ್ನರು ಅದು ಹಮ್ ಮಾಡುತ್ತಿತ್ತು ಎಂದು ಮಕ್ಕಳು ಹೇಳಿದ್ದರಿಂದ ‘ಹಮ್‌ಬಗ್’ ಎಂದು ಕರೆದರು.
೨. ಮಕ್ಕಳು ಚಿಟ್ಟೆಯ ರೆಕ್ಕೆಯನ್ನು ಯಾವುದಕ್ಕೆ ಅಂಟಿಸಿದರು?
Answerಮಕ್ಕಳು ಚಿಟ್ಟೆಯ ರೆಕ್ಕೆಯನ್ನು ಜೇರುಂಡೆಗೆ ಅಂಟಿಸಿದರು.
ವ್ಯಾಕರಣ ಮಾಹಿತಿ
ದ್ವಿರುಕ್ತಿ
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
* ಶಿಕ್ಷಕರು ಮತ್ತೆ ಮತ್ತೆ ವಿವರಣೆ ನೀಡಿದರು.
* ಷರೀಫನು ಬನ್ನಿ ಬನ್ನಿ ಎಂದು ಗೆಳೆಯರನ್ನು ಕರೆದನು.
ಮೇಲಿನ ವಾಕ್ಯಗಳಲ್ಲಿ ‘ಮತ್ತೆ’, ‘ಬನ್ನಿ’ ಎಂಬ ಪದಗಳು ಎರಡೆರಡು ಬಾರಿ ಬಳಕೆಯಾಗಿವೆ. ಇವುಗಳನ್ನು ‘ದ್ವಿರುಕ್ತಿ’ ಎನ್ನುವರು.
(ದ್ವಿ-ಎರಡು, ಉಕ್ತಿ-ಮಾತು)
ಸಾಮಾನ್ಯವಾಗಿ ವಿಷಯಕ್ಕೆ ಒತ್ತುಕೊಡಲು ದ್ವಿರುಕ್ತಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
* ಇತ್ತ ಕಡೆಗೆ ಬೇಗಬೇಗ ಬಾ.
* ಗುಡ್ಡಗಳಲ್ಲಿ ದೊಡ್ಡದೊಡ್ಡ ಕಲ್ಲುಗಳಿವೆ.
ಇಲ್ಲಿ ‘ಬೇಗಬೇಗ’, ‘ದೊಡ್ಡದೊಡ್ಡ’ ಎಂಬ ಪದಗಳು ದ್ವಿರುಕ್ತಿಗಳಾಗಿವೆ.
ಜೋಡುನುಡಿ :
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
* “ಚಿಕ್ಕ ಮಕ್ಕಳಿಗೆ ವೇಷಭೂಷಣಗಳನ್ನು ನಾವು ತೊಡಿಸುತ್ತೇವೆ” ಎಂದನು ಪಿಂಟೋ.
* ಉಪವಾಸದ ರಾತ್ರಿ ಹಣ್ಣುಹಂಪಲು ತಿನ್ನುತ್ತಾರೆ.
ಮೇಲಿನ ವಾಕ್ಯಗಳಲ್ಲಿ ‘ವೇಷಭೂಷಣ’, ‘ಹಣ್ಣು ಹಂಪಲು’ - ಈ ಪದಗಳಲ್ಲಿ ಎರಡು ಬೇರೆಬೇರೆ ಪದಗಳಿದ್ದು ಅವು ಜೊತೆಜೊತೆಯಾಗಿ ಬಳಕೆಯಾಗಿವೆ. ಇವು ಜೋಡುನುಡಿಗಳು.
ಸಾಮಾನ್ಯವಾಗಿ ಮಾತುಗಳನ್ನು, ವಿಷಯಗಳನ್ನು ಮೆರಗುಗೊಳಿಸಲು ಜೋಡುನುಡಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
* ಎಲ್ಲರೂ ತಮ್ಮ ನೋವುನಲಿವುಗಳನ್ನು ಹಂಚಿಕೊಂಡರು.
* ಅವರು ಊರುಕೇರಿ ತಿರುಗಿ ಬಂದರು.
ಇಲ್ಲಿ ‘ನೋವುನಲಿವು,’ ‘ಊರುಕೇರಿ’ ಎಂಬ ಪದಗಳು ಜೋಡುನುಡಿಗಳಾಗಿವೆ.
ಅನುಕರಣಾವ್ಯಯ :
ಕೆಳಗಿನ ವಾಕ್ಯಗಳನ್ನು ಗಮನಿಸಿರಿ.
* ಹಂಪಣ್ಣನು ಸರಸರ ಹೆಜ್ಜೆ ಹಾಕಿದನು.
* ಗಾಳಿಯು ಸುಯ್ಯನೆ ಬೀಸಿತು.
ಮೇಲಿನ ವಾಕ್ಯಗಳಲ್ಲಿ ‘ಸರಸರ,’ ‘ಸುಯ್ಯನೆ’ ಈ ಪದಗಳಿಗೆ ನಿರ್ದಿಷ್ಟವಾದ ಅರ್ಥವಿಲ್ಲ. ಇವು ಧ್ವನಿವಿಶೇಷಣವನ್ನು ಅನುಕರಣ ಮಾಡಿದವುಗಳಾಗಿವೆ. ಇವು ಅನುಕರಣಾವ್ಯಯಗಳು.
ಸಾಮಾನ್ಯವಾಗಿ ಧ್ವನಿವಿಶೇಷಣಗಳನ್ನು ಕೇಳಿದಂತೆ ಪುನಃ ಅನುಕರಣೆ ಮಾಡುವಾಗ ಅನುಕರಣಾವ್ಯಯಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ
* ಮಳೆಯ ಹನಿಗಳು ಪಟಪಟನೆ ಬಿದ್ದವು.
* ನೀರು ಜುಳುಜುಳು ಎಂದು ಹರಿಯಿತು.
ಇಲ್ಲಿ ‘ಪಟಪಟನೆ’, ‘ಜುಳುಜುಳು’ ಎಂಬ ಪದಗಳು ಅನುಕರಣಾವ್ಯಯಗಳಾಗಿವೆ.
ಭಾಷಾ ಆಟಗಳು
ಅ. ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿಕೊಂಡು ಒಂದೇ ರೀತಿಯ ಅಪರಿಚಿತ ಸನ್ನಿವೇಶದ ಚಿತ್ರವನ್ನು ವೀಕ್ಷಿಸಲು ಅವಕಾಶ ನೀಡಿ, ಸರದಿಯಂತೆ ಚರ್ಚಿಸಲು/ ಮಾತನಾಡಲು ಹೇಳುವುದು. ಸರದಿ ಬಂದಾಗ ಮಾತನಾಡದೆ ಇದ್ದರೆ ಅವರು ಆಟದಿಂದ ಹೊರಗೆ ಹೋಗುವುದು.
ತಂಡ ಒಂದರಿಂದ ಒಬ್ಬರಾದ ಅನಂತರ ತಂಡ ಎರಡರಿಂದ ಒಬ್ಬರು ಮಾತನಾಡುವುದು.
ಸನ್ನಿವೇಶದ ಚಿತ್ರಗಳು:
೧. ವಿಮಾನ ನಿಲ್ದಾಣ
೨. ಬಂದರು
೩. ಪೌರಾಣಿಕ ನಾಟಕದ ಒಂದು ಸನ್ನಿವೇಶ
೪. ಉಪಗ್ರಹ ಉಡಾವಣೆಯ ದೃಶ್ಯ
೫. ವಸ್ತು ಪ್ರದರ್ಶನದ ಚಿತ್ರಗಳು
೬. ಕೃಷಿ ಯಂತ್ರೋಪಕರಣಗಳು
೭. ಕಾರ್ಖಾನೆಗಳು
೮. ಮಾಲ್‌ಗಳು
ಯೋಜನೆ
* ನಿಮಗೆ ಅಪರಿಚಿತವೆನಿಸುವ ಸನ್ನಿವೇಶದ ಚಿತ್ರಗಳನ್ನು ಸಂಗ್ರಹಿಸಿರಿ.
* ಎರಡು ಪ್ರಾಣಿ, ಪಕ್ಷಿಗಳ, ಮನುಷ್ಯನ, ಗೊಂಬೆಯ ಚಿತ್ರಗಳನ್ನು ಹಾಳೆಯ ಎದುರು ಬದುರು ಅಂಟಿಸಿರಿ. ಅವು ಏನು ಸಂಭಾಷಣೆ ನಡೆಸಬಹುದು ಎಂದು ಊಹಿಸಿ. ಅವುಗಳ ಮಾತುಗಳನ್ನು ಬರೆಯಿರಿ.
ಪೂರಕ ಓದು
* ಅಪರಿಚಿತ ಸನ್ನಿವೇಶಗಳ ಕುರಿತಾದ ಲೇಖನಗಳನ್ನು ಓದಿರಿ.
* ‘ಮಂಗಳಗ್ರಹದಲ್ಲಿ ಪುಟ್ಟಿ’ ಹಾಡನ್ನು ಅಭಿನಯಿಸಿರಿ.
* ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರವಾಗುವ ವಿವಿಧ ಸಂಭಾಷಣೆ, ಚರ್ಚೆಗಳನ್ನು ಆಲಿಸಿರಿ.