CRECT Education

Class 7 Kannada Lesson 2: Seena Setty is Our Teacher – Practice & Quiz

Description

Practice comprehension questions and a rhyme from the lesson ಸೀನಸೆಟ್ಟರು ನಮ್ಮ ಟೀಚರು (Class 7 Kannada First Language, KTBS).

ಗದ್ಯ (prose) · ವಿ. ಗಾಯತ್ರಿ

ಪಠ್ಯFull text

(Illustration showing a farmer talking to a lady and three children by a paddy field) “ಇವರು ಇವತ್ತಿನಿಂದ ನಿಮ್ಮ ಟೀಚರು. ಇವರು ನಿಮಗೆ ಏನೆಲ್ಲಾ ಕಲಿಸಿಕೊಡುತ್ತಾರೆ ನೋಡ್ತಾ ಇರಿ” – ಮಳೆಗಾಲ ತೀವ್ರಗೊಳ್ಳುತ್ತಿದ್ದ ಆ ದಿನ ಮಾಂಡವಿ ಹೊಸ ಟೀಚರನ್ನು ಮಕ್ಕಳಿಗೆ ಪರಿಚಯಿಸಿದರು. ತುಂಗಾ ಅವರನ್ನು ಸರಿಯಾಗಿ ನೋಡಿದಳು. ಮೊದಲನೆಯದಾಗಿ, ಆತ ವೇಷಭೂಷಣದಿಂದ ಟೀಚರರಂತೆ ಕಾಣುತ್ತಿರಲಿಲ್ಲ. ತುಂಬಾ ಹಳೆಯದಾದ ಒಗೆದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆ ಎತ್ತಿ ಕಟ್ಟಿದ್ದರು. ಒಗೆದ ಚೌಕುಳಿಯ ಅಂಗಿ, ಅದಕ್ಕಿಂತ ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು. ಅವರು ಪಂಚೆ ಸುತ್ತಿರುವ ರೀತಿ ಅಭ್ಯಾಸವಿಲ್ಲದ್ದೆಂದು ಎಷ್ಟು ಚೆನ್ನಾಗಿ ಗೊತ್ತಾಗುತಿತ್ತೆಂದರೆ, ಚಡ್ಡಿಗೆ ದೊರೆತ ಪ್ರಾಮುಖ್ಯ ಪಂಚೆಗೆ ಸಿಗದೆ ಅದು ತುಂಬಾ ಅಮುಖ್ಯನಂತೆ ಮುದುರೆ ಕುಳಿತಿತ್ತು. ಮಕ್ಕಳಿಗೆಲ್ಲಾ “ಇವರೆಂತಾ ಟೀಚರಪ್ಪಾ” ಎಂದು ನಿರಾಸೆಯೂ ಕುತೂಹಲವೂ ಆಗಿತ್ತು. ಮಾಂಡವಿಯ ಆದೇಶದಂತೆ ಮಕ್ಕಳೆಲ್ಲಾ ಹಳ್ಳದ ದಂಡೆಯಲ್ಲಿ ಕೂಡಿಕೊಂಡರು. ತುಂಗಾಗೆ ತಾನು ಆ ಟೀಚರನ್ನು ಎಲ್ಲೋ ನೋಡಿದ್ದೇನೆ ಅನ್ನಿಸುತ್ತಿತ್ತು. ಎಲ್ಲಿ ಎನ್ನುವುದು ಅಷ್ಟು ಸುಲಭವಾಗಿ ಹೊಳೆಯಲಿಲ್ಲ. ಆತನ ಸ್ನೇಹಮಯ ಮುಖ ಬಿಸಿಲು-ಮಳೆ- ಚಳಿಗಳಿಗೆ ಪಕ್ಕಾಗಿ ಕರ್ರಗೆ ಸುಕ್ಕುಗಟ್ಟಿತ್ತು. ಆತ ತಲೆಗೆ ಸುತ್ತಿದ ಲಪ್ಪಟೆಯಂತೂ ತೀರಾ ಪರಿಚಿತವಾಗಿತ್ತು. “ಹಾಂ, ಹೌದು” ನೆನಪಾಯಿತು. ಪ್ರತಿಸಲ ಸಾಮೇರ ಮನೆ ಆಲೆಮನೆಗೆ ಕೋಣ ಹೊಡೆದು ತರುವ ಸೀನಸೆಟ್ಟರು ಇವರು. ತಮ್ಮ ಮೂರೆಕರೆ ಜಮೀನಿನಲ್ಲಿ ತಪ್ಪದೆ ಸಾಸಿವೆ ಬೆಳೆಯುತ್ತಿದ್ದ ಒಬ್ಬರೇ ರೈತ ಇವರು. ತುಂಗಾಳ ದೂರದ ಸಂಬಂಧಿಯಾದ ಸೀನಸೆಟ್ಟರಿಗೂ ಇವಳ ನೆನಪಿತ್ತು. ಪ್ರೀತಿಯಿಂದ ಅವಳ ತಲೆ ಸವರಿ, “ಎಂತಾ, ಮಗಾ, ಆರಾಮಾ? ಅವ್ವ-ಅಪ್ಪಯ್ಯ ಚಂದ ಅದಾರಾ?” ಎಂದು ಕೇಳಿದರು. ‘ಓ’ ತುಂಗಾ ಸ್ವಲ್ಪ ಜೋರಾಗೇ ಹೇಳಿದಳು. ಹೊಸ ಟೀಚರು ತನ್ನ ಪರಿಚಯಸ್ಥರು ಎಂದು ಇತರ ಮಕ್ಕಳೆದುರಿಗೆ ತೋರಿಸಿಕೊಳ್ಳುವುದು ಅವಳಿಗೆ ಹೆಮ್ಮೆಯೆನಿಸಿತ್ತು. “ಹಂಗಾರೆ ಸೀನಸೆಟ್ರು ಇನ್ನು ನಮ್ಮ ಟೀಚರು” ಎಂದು ತುಂಗಾ ನಕ್ಕಳು. “ನಾ ಟೀಚರಲ್ಲ. ಎಂತಾ ಅಲ್ಲ. ನಾನೊಬ್ಬ ಪಡಪೋಶಿ ರೈತ. ನಿಮ್ಮ ಹೆಡ್‌ಮೇಡಮ್ರು ನಿಮ್ಮೆಲ್ಲಾ ಗದ್ದೆ ಕೆಲ್ಸ ಹೇಳ್ಕೊಡಾಕೆ ನನ್ನ ಕರ್ಸಿದಾರೆ” ಎಂದರು ಸಂಕೋಚ-ತಮಾಷೆಯಿಂದ ಸೀನಸೆಟ್ಟರು. ಮಾಂಡವಿ ಆತನ ಪಕ್ಕಕ್ಕೇ ನಿಂತು, “ಹೌದು. ಹೌದು, ಇವರು ನಿಮ್ಮ ಬೇಸಾಯದ ಟೀಚರು, ನಿಮಗೆ ಬೇಸಾಯದಲ್ಲಿ ಸಹಾಯ ಮಾಡಲು ಇವರು ಒಪ್ಪಿಕೊಂಡಿರುವುದು ನಮ್ಮ ಪುಣ್ಯ. ಸರಿ ಮೇಷ್ಟ್ರೆ, ಈಗ ನೀವು ಪ್ರಾರಂಭಿಸಬಹುದು”ಎಂದರು. ಚಿಣ್ಣರ ಲೋಕದ ಬಹುಪಾಲು ಮಕ್ಕಳು ರೈತ ಕುಟುಂಬದವರೇ. ಒಂದಲ್ಲಾ ಒಂದು ರೀತಿಯಲ್ಲಿ ಬೇಸಾಯದಲ್ಲಿ ತೊಡಗಿಕೊಳ್ಳುತ್ತಿದ್ದ ಅವರಿಗೆ ಹೊಸದಾಗಿ ಬೇಸಾಯವನ್ನೇನೂ ಕಲಿಸಬೇಕಾಗಿರಲಿಲ್ಲ. ಆದರೆ ಶಾಲೆಯ ಕಲಿಕೆಯಲ್ಲಿ ಬೇಸಾಯವನ್ನು ಅಳವಡಿಸುವ ಮಾಂಡವಿಯ ಉದ್ದೇಶವೇ ಬೇರೆಯಾಗಿತ್ತು. ಶಾಲಾ ಶಿಕ್ಷಣ ನಿಜ ಬದುಕಿನ ಜೊತೆಗೆ ಹಾಸುಹೊಕ್ಕಿನ ಸಂಬಂಧ ಹೊಂದಿರಬೇಕೆಂಬುದೇ ಮಾಂಡವಿಯ ನಂಬಿಕೆಯಾಗಿತ್ತು. ಅದೇ ಅವರ ಶಿಕ್ಷಣ ಮಾದರಿಯ ತಳಹದಿ ಕೂಡಾ. ಶಾಲಾ ಶಿಕ್ಷಣದಲ್ಲಿ ಅವರು ಬೇಸಾಯವನ್ನು ಅಳವಡಿಸಲು ಮುಖ್ಯಕಾರಣ ಇದಾಗಿದ್ದರೂ ಕೂಡ ಅದು ಇನ್ನೂ ಅನೇಕ ವಿಚಾರಗಳಿಗೆ ಸಹಾಯವಾಗಿತ್ತು. ಮೊದಲನೆಯದಾಗಿ, ಮಣ್ಣಿನ ಕಣಕಣಗಳೊಟ್ಟಿಗೆ ಸಂವಾದಿಸಬಲ್ಲ ಸೀನಸೆಟ್ಟರಂತಹ ರೈತರ ಅನುಭವಜನ್ಯ ವಿವರಣೆ ತರಗತಿಯೊಳಗೆ ನಡೆಯಬೇಕಾದ ಅರ್ಧಪಾಲು ವಿಜ್ಞಾನದ ಪಾಠವನ್ನು ಗದ್ದೆಯಲ್ಲೇ ಕಲಿಸಿಬಿಡುತ್ತಿತ್ತು. ಎರಡನೆಯದಾಗಿ, ಮಕ್ಕಳು ಕುಟುಂಬದೊಂದಿಗೆ ವ್ಯವಸಾಯದಲ್ಲಿ ಪಾಲ್ಗೊಳ್ಳುತ್ತಿದ್ದರೂ ಅವರಿಗೆ ಸಿಗುತ್ತಿದ್ದುದು ಎರಡನೇ ಸ್ಥಾನ, ಸೀಮಿತ ಒಳಗೊಳ್ಳುವಿಕೆ. ಆದರೆ ಇಲ್ಲಿ ಬೇಸಾಯದ ಎಲ್ಲಾ ಹಂತಗಳಲ್ಲೂ ಎಲ್ಲಾ ಕೆಲಸಗಳನ್ನು, ಜವಾಬ್ದಾರಿಗಳನ್ನು ಸ್ವತಃ ತಾವೇ ಮಾಡಬೇಕಾದ್ದರಿಂದ ಅವರಿಗೆ ಇಡಿಯಾದ ಅನುಭವ ಸಿಗುತ್ತಿತ್ತು. ಹಳ್ಳದ ಬದಿಯ ಎರಡೆಕರೆ ಜಮೀನನ್ನು ಮಾಂಡವಿ ಬೇಸಾಯಕ್ಕೆಂದೇ ಕೊಂಡುಕೊಂಡಿದ್ದರು. ಹಾಗೆಯೇ ಮನೆಯಲ್ಲಿ ಮುಂದುಗಡೆಯ ಒಂದು ರೂಮನ್ನು ಮಕ್ಕಳಿಗೆ ಬೇಸಾಯದ ಸಾಮಗ್ರಿಗಳನ್ನು ಇಟ್ಟುಕೊಳ್ಳಲೆಂದು ತೆರವು ಮಾಡಲಾಗಿತ್ತು. ಈಗಾಗಲೇ ಭತ್ತ ಬಿತ್ತಿದ್ದ ಗದ್ದೆಯದು. ನಿಲ್ಲಲಿ ಎಂದರೂ ಕೇಳದೆ ಜಡಿಮಳೆಯಲ್ಲೇ ಶಾಲೆಯ ಐವತ್ತೂ ಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಸಂಭ್ರಮದಿಂದ ಗದ್ದೆಗಿಳಿದರು ಸೀನಸೆಟ್ಟರ ಜೊತೆ. “ಮುಂಚೆ ನಾವು ಸಸಿಗಳನ್ನು ಕೀಳಾಣ. ಇವತ್ತೇ ಸಸಿ ಕಿತ್ತು ಮುಗೀತಂದ್ರೆ ನಾಳೆಯಿಂದ ನಾಟಿ ಮಾಡಾಣ” ಸೀನಸೆಟ್ಟರೆಂದರು ಮಕ್ಕಳನ್ನು ಉದ್ದೇಶಿಸಿ. ಮೊದಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡಸಮೇತ ಕೀಳುವುದು ಸುಲಭವಾಗಲಿಲ್ಲ. ಅನೇಕ ಸಸಿಗಳನ್ನು ಹಾಳು ಮಾಡಿದರು. ಹತ್ತಾರು ಬಾರಿ ಕಿತ್ತು ಕಿತ್ತು ಪ್ರಯತ್ನಿಸಿ ಅನಂತರ ಅವರಿಗೆ ಕೀಳುವುದು ಅಭ್ಯಾಸವಾಗಿ ವೇಗವೂ ಹಿಡಿಯಿತು. ಅವುಗಳನ್ನು ಸಣ್ಣ ಸಣ್ಣ ಕಟ್ಟುಗಳಲ್ಲಿ ಕಟ್ಟಿ ಕೆಸರು ಗದ್ದೆಯಲ್ಲಿಡುವುದನ್ನು ‘ಟೀಚರು’ ಕಲಿಸಿಕೊಟ್ಟರು. ಒಂದು ಗಂಟೆಯ ಕೆಲಸದ ಅನಂತರ ಸೀನಸೆಟ್ಟರು “ಇವತ್ತಿಗೆ ಸಾಕು, ನಾಳೆ ಉಳಿದದ್ದು” ಎಂದರು. ಸಂಭ್ರಮ ಹಿಡಿಸಿಕೊಂಡಿದ್ದ ಮಕ್ಕಳು ಕೇಳಿಯಾರೇ? “ಸೀನ ಸೆಟ್ರೆ, ನಿಮ್ಮ ದಮ್ಮಯ್ಯ, ಇವತ್ತು ಪೂರಾ ಕಿತ್ತೇ ಹೋಗಾಣ” ಎಂದು ಒಕ್ಕೊರಳಿನಿಂದ ಒತ್ತಾಯಪೂರ್ವಕವಾಗಿ ಗೋಗರೆದರು. ಅಷ್ಟರಲ್ಲೇ ಒಂದು ಸಣ್ಣ ಹಾವು ಅವಸರದಿಂದ ಸರಿಯುತ್ತಾ ಹಾಲಪ್ಪ ಎನ್ನುವವನ ಕಾಲನ್ನು ಕಚ್ಚಿಬಿಟ್ಟಿತ್ತು. ಅವನು ಹೌಹಾರಿ ಬಿದ್ದ. ತಕ್ಷಣ ಸೀನಸೆಟ್ಟರು ಅವನನ್ನು ಹಿಡಿದುಕೊಂಡರು. “ಹೆದರ್ಬೇಡಾ ಮಗಾ. ಎಂತಾ ಆಗಲ್ಲ. ಅದು ನೀರಾವು. ವಿಷದ ಹಾವಲ್ಲ. ಒಂದು ಮೀನು ಕಚ್ಚಿದ್ರೆ ಹೆಂಗೋ ಅಷ್ಟೇ” ಎಂದು ತಿಳಿ ಹೇಳಿ ಸಮಾಧಾನಿಸಿದರು. ಮುಂದಿನ ದಿನಗಳಲ್ಲಿ ನಾಟಿ. ಇದು ಸಸಿ ಕೀಳುವುದಕ್ಕಿಂತಲೂ ಕಷ್ಟಕರವಾದ ಕೆಲಸ. ಅನೇಕ ಸಸಿಗಳನ್ನು ಒಟ್ಟಿಗೆ ಹಿಡಿದು ಒಂದೇ ಸಲಕ್ಕೆ ಬೇರು ನಾಟುವಂತೆ ಹೆಬ್ಬೆಟ್ಟಿನಿಂದ ಗಟ್ಟಿಯಾಗಿ ಒತ್ತಿ ಊರಬೇಕು. ಮೊದಮೊದಲಿಗೆ ಕೆಲ ಮಕ್ಕಳಿಗಂತೂ ಇದು ತಮ್ಮಿಂದ ಸಾಧ್ಯವೇ ಇಲ್ಲ ಎನಿಸಿಬಿಟ್ಟಿತ್ತು. ಆದರೆ ಸೀನಸೆಟ್ಟರ ಅಪಾರ ತಾಳ್ಮೆ, ಉತ್ತೇಜನಗಳು ಅವರನ್ನು ಕೆಲಸಕ್ಕೆ ಹೊಂದಿಸಿಬಿಟ್ಟವು. “ಹಾಡು ಹೇಳ್ಕ್ಯಂಡು ಕೆಲಸ ಮಾಡಿ. ಆಗ ಕಷ್ಟಾನೇ ತಿಳಿಯಲ್ಲ” ಎಂದು ಉತ್ತೇಜಿಸಿದರು. ತಕ್ಷಣ ಎಲ್ಲರೂ, “ಚಂದ್ರಕಾಂತ ಸುರು ಮಾಡೋ” ಎಂದು ಕೂಗಿಕೊಂಡರು. ಅವನ ಧ್ವನಿಗೆ ತಮ್ಮ ಧ್ವನಿಯ ಅಲೆ ಸೇರಿಸಿದರು. ಮಾರನೆಯ ದಿನ ಯಶೋದ ಹೊಸತನ್ನು ಹುಡುಕಿದ್ದಳು. “ಕೈ ಎಲ್ಲಿಗ್ ಹೋತು?” “ಸಂತೆಗೆ” ಇಬ್ಬರು ಆಡುವ ಈ ಆಟವನ್ನು ಎಲ್ಲರೂ ಭಾಗವಹಿಸುವಂತೆ ಪರಿವರ್ತಿಸಿದ್ದಳು. ‘ಕೈ ಎಲ್ಲಿಗ್ ಹೋತು?’ ಎಂದು ಒಬ್ಬ ಪ್ರಾರಂಭಿಸಿದರೆ ಪಕ್ಕದಲ್ಲಿರುವವಳು ‘ಸಂತೆಗೆ’ ಎನ್ನಬೇಕು. ಮತ್ತೆ ಅವಳ ಪಕ್ಕಕ್ಕೆ ನಿಂತವನು “ಸಂತೆಯಿಂದ ಏನ್ತಂದೆ” ಎಂದರೆ ಮುಂದಿನವಳು ‘ಬಾಳೆಹಣ್ಣು’ ಎನ್ನುವಳು. ಹೀಗೆ ಆಟ ಸಾಗುವುದು ಬಾಳೆಹಣ್ಣು ಏನ್ಮಾಡ್ದೆ? ಬೂದಿ ಏನ್ ಮಾಡ್ದೆ? ತಿಂದೆ ಗೊಬ್ಬರದ ಗುಂಡಿಗೆ ಹಾಕ್ದೆ ಸಿಪ್ಪೆ ಏನ್ಮಾಡ್ದೆ? ಗೊಬ್ಬರದ ಗುಂಡಿ ಏನ್ ಕೊಡ್ತು? ಕದದ ಮೂಲೆಗೆ ಹಾಕ್ದೆ ಗೊಬ್ರ ಕೊಡ್ತು ಕದದ ಮೂಲೆ ಏನ್ ಕೊಡ್ತು? ಗೊಬ್ರ ಏನ್ ಮಾಡ್ದೆ? ಚಕ್ಕೆ ಕೊಡ್ತು ಬಾಳೆಗಿಡಕ್ಕೆ ಹಾಕ್ದೆ ಚಕ್ಕೆ ಏನ್ ಮಾಡ್ದೆ? ಬಾಳೆಗಿಡ ಏನ್ ಕೊಡ್ತು? ಒಲೆಗೆ ಹಾಕ್ದೆ ಬಾಳೆಹಣ್ಣು ಕೊಡ್ತು ಒಲೆ ಏನ್ ಕೊಡ್ತು? ಬಾಳೆಹಣ್ಣು ಏನ್ ಮಾಡ್ದೆ? ಬೂದಿ ಕೊಡ್ತು ಗುಳುಂಗುಳುಂ ತಿಂದೆ. ಹೀಗೆ ಮತ್ತೆ ಇಡೀ ಪ್ರಶ್ನೆಯುತ್ತರದ ಚಕ್ರ ತಿರುಗುವುದು. ಯಶೋದಳ ಈ ಆಟದಿಂದ ಅಂದು ನಾಟಿ ಮುಗಿಯುವ ವೇಳೆಗೆ ಪ್ರತಿ ಮಕ್ಕಳೂ ನಾಲ್ಕು ಬಾಳೆಹಣ್ಣುಗಳನ್ನಾದರೂ ತಿಂದಿದ್ದರು. ನಾಟಿ ಮುಗಿಯುವವರೆಗೂ ಸೀನಸೆಟ್ರು ಮಕ್ಕಳ ಜೊತೆಗೆ ಇದ್ದು ಅಲ್ಲಿಂದ ಕಾಲಕಾಲಕ್ಕೆ ಅವರು ಗಮನಿಸಿಕೊಳ್ಳಬೇಕಾದ ವಿಷಯಗಳನ್ನೆಲ್ಲಾ ಹೇಳಿಕೊಟ್ಟರು. ನಾಟಿ ಮುಗಿದ ಮೇಲೆ ಇನ್ನು ಯಾವಾಗ ಹೊಡೆ ಹೊರಟಿತೋ, ಯಾವಾಗ ತೆನೆ ಬಂದಿತೋ ಎಂದು ಮಕ್ಕಳ ಚಡಪಡಿಕೆ. ತುಂಗಾಗಂತೂ ಪ್ರತಿದಿನ ಶಾಲೆಗೆ ಬಂದ ತಕ್ಷಣ ಗದ್ದೆಯನ್ನು ನೋಡುವವರೆಗೆ ಎಂತದೋ ಚಡಪಡಿಕೆ. ಅವಳೂ - ಕಿಟ್ಟನೂ ಸೇರಿ ಮನೆಯ ಅಟ್ಟದ ಮೇಲೆ ಹತ್ತಿ ಕಿಟಕಿ ಕಂಡಿಯಲ್ಲಿ ನೋಡಿದರೆ ಗದ್ದೆ ತುಂಬಾ ಚೆನ್ನಾಗಿ ಕಾಣುತ್ತದೆಂದು ಕಂಡುಕೊಂಡಿದ್ದರು. ಈ ರಹಸ್ಯ ಯಾರಿಗೂ ತಿಳಿಯಬಾರದೆಂದೂ ಗುಟ್ಟಾಗಿಡಲು ಪ್ರಯತ್ನಿಸಿದಷ್ಟೂ ಅದು ಬಯಲಾಗಿಬಿಟ್ಟು ಕೊನೆಗೆ ಅಟ್ಟ, ಗದ್ದೆ ವೀಕ್ಷಣೆಯ ಟವರ್ ಆಗಿ ಪರಿವರ್ತಿತಗೊಂಡಿತ್ತು. **ಕೌಶಲ :** ಓದುವುದು **ಸಾಮರ್ಥ್ಯ :** ವಿವಿಧ ಪದಗಳ ಉಚ್ಚಾರಣೆಯಲ್ಲಿರುವ ಧ್ವನಿಸಾಮ್ಯತೆ, ಧ್ವನಿವ್ಯತ್ಯಾಸಗಳನ್ನು ಅರ್ಥಮಾಡಿಕೊಂಡು ಓದುವುದು. **ಆಶಯ :** ನಮ್ಮ ಜೀವನದ ಪ್ರತಿ ಹಂತದಲ್ಲೂ ನಾವು ಕಲಿಯುತ್ತಿರುತ್ತೇವೆ. ನಮ್ಮ ವ್ಯಕ್ತಿತ್ವದ ಬೆಳವಣಿಗೆ ಕೇವಲ ಶಾಲೆಯಿಂದಲ್ಲ; ಮನೆ, ಇತರರ ಒಡನಾಟ, ಪರಿಸರ, ಮಾಧ್ಯಮಗಳಿಂದ ಜೀವನದ ಪಾಠವನ್ನು ಕಲಿಯುತ್ತ ಬೆಳೆಯುತ್ತೇವೆ. ಶಾಲೆಯಲ್ಲಿ ಗುರುಗಳಿದ್ದಂತೆ ಶಾಲೆಯ ಹೊರಗೂ ಹಲವು ಗುರುಗಳು ನಮಗಿರುತ್ತಾರೆ. ಅವರೆಲ್ಲರ ಕೊಡುಗೆಯಿಂದ ಬೋಧನೆಯಿಂದ ನಾವೆಲ್ಲ ಬೆಳೆಯುತ್ತಾ ಹೋಗುತ್ತೇವೆ. ಈ ವಿಚಾರ ಮನದಲ್ಲಿ ಮೂಡಿದಾಗ ಲೋಕವೇ ನಮ್ಮ ಗುರು ಎಂಬ ಭಾವನೆ ಮೂಡುತ್ತದೆ. **ಕೃತಿಕಾರರ ಪರಿಚಯ** (Portrait of V. Gayatri) ಶ್ರೀಮತಿ ವಿ. ಗಾಯತ್ರಿ ಲೇಖಕಿ, ಅನುವಾದಕಿ, ಶಿಕ್ಷಣ ಇಲಾಖೆಯ ‘ಮಹಿಳಾ ಸಮಖ್ಯ’ ಮತ್ತು ನೀರಾವರಿ ಇಲಾಖೆಯ ‘ಜಲ ಸಂವರ್ಧನೆ ಯೋಜನೆ’ಗಳಲ್ಲಿ ಹಿರಿಯ ಅಧಿಕಾರಿಯಾಗಿ ಅನೇಕ ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಮುಖ ಪ್ರಕಟಿತ ಕೃತಿಗಳು, **‘ತುಂಗಾ’** - ಮಕ್ಕಳ ಸೃಜನಶೀಲ ಕಲಿಕೆಯ ಸುತ್ತ ಹೆಣೆದ ಕಾದಂಬರಿ; **‘ತೊತ್ತೋಚಾನ್’** ವಿಶ್ವವಿಖ್ಯಾತ ಜಪಾನಿ ಕಾದಂಬರಿಯ ಕನ್ನಡ ಅನುವಾದ. **‘ಕರ್ನಾಟಕದಲ್ಲಿ ಸಾವಯವ ಪರಂಪರೆಯ ಕಥನ ಭಾಗ ೧ ಮತ್ತು ೨’, ‘ಸಹಜ/ಸಾವಯವ ರೈತರ ಕೃಷಿ ಮತ್ತು ಬದುಕುಗಳು’**, ಕೇಂದ್ರ ಪರಿಸರ ಮಂತ್ರಾಲಯದ ಪರಿಸರ ಶಿಕ್ಷಣ ಕೇಂದ್ರಕ್ಕಾಗಿ **‘ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು’, ‘ಎಳೆಯರಿಗಾಗಿ ಪರಿಸರ’** ಮುಂತಾದ ಮಹತ್ವದ ಕೃತಿಗಳ ಅನುವಾದ ಮತ್ತು ಸಂಪಾದನೆ. ಇವು ಶಾಲಾ ಶಿಕ್ಷಕರಿಗೆ ಓದುವ ಸಾಮಗ್ರಿಗಳಾಗಿವೆ. ಮೇಲಿನ ಪಾಠವನ್ನು ಅವರ **‘ತುಂಗಾ’** ಕೃತಿಯಿಂದ ಆರಿಸಲಾಗಿದೆ.

ಪದಗಳ ಅರ್ಥword meanings

KannadaPronunciationMeaning
ತೀವ್ರಹೆಚ್ಚು; ಲಪ್ಪಟೆ-ತಲೆಗೆ ಸುತ್ತಿದಬಟ್ಟೆ; ಪಕ್ಕಾಗು-ಒಳಗಾಗು; ಎಂತಾ ವಗ-ಏನು ವಗು; ಚಂದ-ಚೆನ್ನಾಗಿ; ಪಡಪೋಶಿ-ಕೆಲಸಕ್ಕೆ ಬಾರದ; ಕರ್ಸಿದಾರೆ-ಕರೆಸಿದ್ದಾರೆ; ತಳಹದಿ-ಬುನಾದಿ; ಸಂವಾದಿಸು-ಮಾತನಾಡು, ಚರ್ಚೆಮಾಡು; ಕಂಬಳಿಗೊಪ್ಪೆ-ಮಳೆಯಿಂದ ರಕ್ಷಿಸಿಕೊಳ್ಳಲು ಕಂಬಳಿಯಿಂದ ಮಾಡಿದ ಮುಸುಕು; ಗೊರಬು, ತೆರವು-ಖಾಲಿ; ನಾಟಿ-ಪೈರಿನ ಸಸಿಗಳನ್ನು ನೆಡುವುದು; ನೀರಾವು-ನೀರಿನಲ್ಲಿ ಬದುಕುವ ಹಾವು; ಹೋತು-ಹೋಯಿತು; ಕದ-ಬಾಗಿಲು; ಹೊಡೆ-ಕಾಳು ತುಂಬುವ ಮುನ್ನ ಕಾಣುವ ಪೈರಿನ ತುದಿ; ತೆನೆ- ಕಾಳು ತುಂಬಿದ ಪೈರಿನ ತುದಿ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಮಾಂಡವಿ ಟೀಚರ್ ಯಾರನ್ನು ಪರಿಚಯಿಸಿದರು?

    Answer

    ಮಾಂಡವಿ ಟೀಚರ್ ಹೊಸ ಟೀಚರಾದ ಸೀನಸೆಟ್ಟರನ್ನು ಮಕ್ಕಳಿಗೆ ಪರಿಚಯಿಸಿದರು.

  2. ೨. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು?

    Answer

    ಸೀನಸೆಟ್ಟರು ತಮ್ಮ ಮೂರೆಕರೆ ಜಮೀನಿನಲ್ಲಿ ತಪ್ಪದೆ ಸಾಸಿವೆ ಬೆಳೆಯುತ್ತಿದ್ದರು.

  3. ೩. ಮಕ್ಕಳು ಏನು ಹಾಕಿಕೊಂಡು ಗದ್ದೆಗೆ ಇಳಿದರು?

    Answer

    ಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಗದ್ದೆಗೆ ಇಳಿದರು.

  4. ೪. ಹಾಲಪ್ಪನ ಕಾಲನ್ನು ಏನು ಕಚ್ಚಿತು?

    Answer

    ಹಾಲಪ್ಪನ ಕಾಲನ್ನು ಒಂದು ಸಣ್ಣ ಹಾವು ಕಚ್ಚಿತು.

  5. ೫. ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್ ಆಗಿ ಪರಿವರ್ತಿತಗೊಂಡಿತ್ತು?

    Answer

    ಮನೆಯ ಅಟ್ಟ ಮಕ್ಕಳಿಗೆ ಗದ್ದೆ ವೀಕ್ಷಣೆಯ ಟವರ್ ಆಗಿ ಪರಿವರ್ತಿತಗೊಂಡಿತ್ತು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.

  1. ೧. ಸೀನಸೆಟ್ಟರ ವೇಷ ಹೇಗಿತ್ತು?

    Answer

    ಸೀನಸೆಟ್ಟರ ವೇಷ ಟೀಚರರಂತೆ ಇರಲಿಲ್ಲ. ಅವರು ತುಂಬಾ ಹಳೆಯದಾದ ಒಗೆದ ಪಂಚೆಯನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆ ಎತ್ತಿ ಕಟ್ಟಿದ್ದರು. ಒಗೆದ ಚೌಕುಳಿಯ ಅಂಗಿ ಮತ್ತು ಅದಕ್ಕಿಂತ ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು.

  2. ೨. ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು?

    Answer

    ಮೊದಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡಸಮೇತ ಕೀಳುವುದು ಸುಲಭವಾಗಲಿಲ್ಲ. ಅನೇಕ ಸಸಿಗಳನ್ನು ಅವರು ಹಾಳು ಮಾಡಿದರು. ಆದರೆ ಹತ್ತಾರು ಬಾರಿ ಪ್ರಯತ್ನಿಸಿದ ಅನಂತರ ಅವರಿಗೆ ಸಸಿ ಕೀಳುವುದು ಅಭ್ಯಾಸವಾಗಿ ವೇಗವೂ ಹಿಡಿಯಿತು.

  3. ೩. ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು?

    Answer

    ಸೀನಸೆಟ್ಟರು, “ಹೆದರಬೇಡ ಮಗಾ, ಏನೂ ಆಗಲ್ಲ; ಅದು ನೀರಾವು, ವಿಷದ ಹಾವಲ್ಲ. ಒಂದು ಮೀನು ಕಚ್ಚಿದರೆ ಹೇಗೋ ಅಷ್ಟೇ” ಎಂದು ತಿಳಿ ಹೇಳಿ ಸಮಾಧಾನಿಸಿದರು.

ಇ. ಕೆಳಗಿನ ಮಾತುಗಳನ್ನು ಯಾರು, ಯಾರಿಗೆ ಹೇಳಿದರು? ತಿಳಿಸಿ.

  1. ೧. ‘ಹಂಗಾರೆ ಸೀನಸೆಟ್ರು ನಮ್ಮ ಟೀಚರು’

    Answer

    ಈ ಮಾತನ್ನು ತುಂಗಾ ಇತರ ಮಕ್ಕಳಿಗೆ ಹೇಳಿದಳು.

  2. ೨. ‘ಮುಂಚೆ ಸಸಿಗಳನ್ನು ಕೀಳಾಣ’

    Answer

    ಈ ಮಾತನ್ನು ಸೀನಸೆಟ್ಟರು ಮಕ್ಕಳಿಗೆ ಹೇಳಿದರು.

  3. ೩. ‘ಇವತ್ತು ಪೂರಾ ಕಿತ್ತೇ ಹೋಗಾಣ’

    Answer

    ಈ ಮಾತನ್ನು ಮಕ್ಕಳು ಸೀನಸೆಟ್ಟರಿಗೆ ಹೇಳಿದರು.

  4. ೪. ‘ಕೈ ಎಲ್ಲಿಗ್ ಹೋತು’

    Answer

    ಈ ಮಾತನ್ನು ಆಟದಲ್ಲಿ ಒಬ್ಬ ಮಗು ಪಕ್ಕದ ಮಗುವಿಗೆ ಹೇಳುತ್ತಿತ್ತು.

ಚಟುವಟಿಕೆ

  1. ಅ. ಶಾಲೆಯಿಂದ ಹೊರಗೆ ನೀವು ಕಲಿಯಬಹುದಾದ ವಿಷಯಗಳನ್ನು ಪಟ್ಟಿಮಾಡಿ.

    Answer

    ಮನೆ, ಇತರರ ಒಡನಾಟ, ಪರಿಸರ, ಮಾಧ್ಯಮಗಳು, ಬೇಸಾಯ, ಮಣ್ಣು-ಸಸಿ-ನಾಟಿ-ಗೊಬ್ಬರ ಮುಂತಾದ ವಿಷಯಗಳನ್ನು ಶಾಲೆಯಿಂದ ಹೊರಗೆ ಕಲಿಯಬಹುದು.

  2. ಆ. ಕೆಳಗೆ ನೀಡಿರುವ ಪದಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಪದಗಳನ್ನು ಮತ್ತು ಶಾಲೆಗೆ ಸಂಬಂಧಿಸಿದ ಪದಗಳನ್ನು ಪ್ರತ್ಯೇಕ ಪಟ್ಟಿಮಾಡಿ ಬರೆಯಿರಿ.

  3. ಗದ್ದೆ, ಬೆಂಚು, ಸಸಿ, ಕಪ್ಪುಹಲಗೆ, ನಾಟಿ, ಪೈರು, ಪುಸ್ತಕ, ಪೆನ್ನು, ಜಮೀನು, ಮೇಷ್ಟ್ರು, ರೈತ, ಕೆಸರು, ಗಂಟೆ, ತೆನೆ, ಗೊಬ್ಬರ, ಸೀಮೆಸುಣ್ಣ.

    Answer

    ಬೇಸಾಯಕ್ಕೆ ಸಂಬಂಧಿಸಿದವು: ಗದ್ದೆ, ಸಸಿ, ನಾಟಿ, ಪೈರು, ಜಮೀನು, ರೈತ, ಕೆಸರು, ತೆನೆ, ಗೊಬ್ಬರ ಶಾಲೆಗೆ ಸಂಬಂಧಿಸಿದವು: ಬೆಂಚು, ಕಪ್ಪುಹಲಗೆ, ಪುಸ್ತಕ, ಪೆನ್ನು, ಮೇಷ್ಟ್ರು, ಗಂಟೆ, ಸೀಮೆಸುಣ್ಣ

ಪೂರಕ ಮಾಹಿತಿ

  1. ೧. ಶಿಶುಪ್ರಾಸಗಳು

  2. ಈ ಪಾಠದಲ್ಲಿ ಮಕ್ಕಳ ಹಾಡೊಂದಿದೆ. ಇದನ್ನು ಶಿಶುಪ್ರಾಸ ಎನ್ನಬಹುದು. ಮಕ್ಕಳಿಗಾಗಿ ರಚಿತವಾದ ಹಾಡುವ ಪ್ರಾಸಯುಕ್ತ ಪದಗಳೇ ಶಿಶುಪ್ರಾಸಗಳು. ಮಾನವನ ಬದುಕಿನಲ್ಲಿ ಶೈಶವ ಎಷ್ಟು ಸಾಮಾನ್ಯವಾದುದೋ ಶಿಶುಗೀತೆಗಳೂ ಅಷ್ಟೇ ಸಾಮಾನ್ಯವಾದವು. ಮಾತು ಕಲಿಯುವ ಹಂತದಲ್ಲಿ ಮಕ್ಕಳಲ್ಲಿ ಮುಗ್ಧತೆ ಕುತೂಹಲ ತುಂಬಿರುತ್ತದೆ. ದೊಡ್ಡವರು ಕಟ್ಟುವ ಪ್ರಾಸಗಳಿಗಿಂತ ತಮ್ಮ ಒರಗೆಯವರ ಬಾಯಲ್ಲಿ ಬರುವ ಪ್ರಾಸಗಳೇ ಮಕ್ಕಳಿಗೆ ಅಚ್ಚುಮೆಚ್ಚು. ತಮ್ಮ ತಮ್ಮ ಮನೋಧರ್ಮಕ್ಕನುಗುಣವಾದ ಪ್ರಾಸಗಳನ್ನು ಅವರು ಸ್ವೀಕರಿಸುತ್ತಾರೆ. ಹಿಡಿಸದವುಗಳನ್ನು ನಿರಾಕರಿಸುತ್ತಾರೆ. ಮಕ್ಕಳ ಬಹುತೇಕ ಹಾಡುಗಳು ಆಟದ ಅಂಗವಾಗಿ ಬರುತ್ತವೆ. ಆದ್ದರಿಂದ ಇಂಥ ಆಟದ ಹಾಡುಗಳಲ್ಲಿ ಎರಡು ಗುಂಪು ಇರುವುದು ಸಾಮಾನ್ಯ. ಒಬ್ಬ ಒಂದು ಗುಂಪಾಗಿ ಹಾಡಿದರೆ, ಉಳಿದವರು ಮತ್ತೊಂದು ಗುಂಪಾಗಿ ಹಾಡುತ್ತಾರೆ. ಈ ಬಗೆಯ ಕ್ರೀಡಾ ಪ್ರಾಸಗಳಲ್ಲದೆ ಹೆಸರಿನ ಪ್ರಾಸಗಳು, ಸಂಖ್ಯಾಪ್ರಾಸಗಳು, ಒಗಟು ಪ್ರಾಸಗಳು, ಪ್ರಕೃತಿಪ್ರಾಸಗಳು, ದೈನಂದಿನ ವ್ಯವಹಾರಕ್ಕೆ ಸಂಬಂಧಿಸಿದ ಪ್ರಾಸಗಳು, ಕೊಂಡಿಪ್ರಾಸಗಳು ಇತ್ಯಾದಿಯಾಗಿ ವಿಂಗಡಿಸಲು ಸಾಧ್ಯವಿದೆ. ಒಂದೆರಡು ಉದಾಹರಣೆ ಗಮನಿಸಿ.

  3. ಕಣ್ಣಾ ಮುಚ್ಚೆ

  4. ಕಾಡೇಗೂಡೆ

  5. ಉದ್ದಿನ ಮೂಟೆ

  6. ಉರುಳೇ ಹೋಯ್ತು

  7. ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ

  8. ನಿಮ್ಮಯ ಹಕ್ಕಿ ಹಿಡ್ಕೊಳ್ಳಿ

  9. ಗಣೇಶ ಬಂದ

  10. ಕಾಯಿಕಡಬು ತಿಂದ

  11. ದೊಡ್ಡೆರೇಲಿ ಬಿದ್ದ

  12. ಚಿಕ್ಕೇರೇಲಿ ಎದ್ದ

  13. ೨. ಕೆಳಗೆ ನೀಡಿರುವ ಬಂಡಿ ಆಟದಲ್ಲಿ ಬಿಟ್ಟ ಪದಗಳನ್ನು ತುಂಬಿ.

  14. ಅಚ್ಚಚ್ಚು, ಬೆಲ್ಲದಚ್ಚು

  15. ಅಲ್ಲಿನೋಡು, ಇಲ್ಲಿನೋಡು

  16. ಸಂಪಂಗಿ ಮರದಲಿ ಗುಂಪುನೋಡು

  17. ಯಾವ ಗುಂಪು? ___________

  18. ಯಾವ ಕಾಗೆ? ___________

  19. ಯಾವ ಕಪ್ಪು?___________

  20. ಯಾವ ಇದ್ದಿಲು? ___________

  21. ಯಾವ ಮರ?___________

  22. ಯಾವ ಮಾವು? ___________

  23. ಯಾವ ಸಿಹಿ? ___________

  24. ಯಾವ ಸಕ್ಕರೆ? ___________

  25. ಯಾವ ಮಂಡ್ಯ? ___________

  26. ಯಾವ ಕರ್ನಾಟಕ? ___________ .

ವ್ಯಾಕರಣ ಮಾಹಿತಿ

  1. ಸರ್ವನಾಮಗಳನ್ನು ‘ಪುರುಷಾರ್ಥಕ ಸರ್ವನಾಮ’, ‘ಆತ್ಮಾರ್ಥಕ ಸರ್ವನಾಮ’, ‘ಪ್ರಶ್ನಾರ್ಥಕ ಸರ್ವನಾಮ’ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.

  2. ೧. **ಪುರುಷಾರ್ಥಕ ಸರ್ವನಾಮ :** ಪುರುಷಾರ್ಥಕ ಸರ್ವನಾಮಗಳಲ್ಲಿ ಮೂರು ವಿಧ.

  3. ಅ. ಉತ್ತಮ ಪುರುಷ : ಮಾತನಾಡುವ ವ್ಯಕ್ತಿ ತನ್ನನ್ನು ನಿರ್ದೇಶಿಸಿಕೊಳ್ಳುವ ಸರ್ವನಾಮಗಳನ್ನು ‘ಉತ್ತಮ ಪುರುಷ’ ಎನ್ನಲಾಗುತ್ತದೆ. ಉದಾ : ನಾನು, ನಾವು.

  4. ಆ. ಮಧ್ಯಮ ಪುರುಷ : ಮಾತನಾಡುವವನು ತನ್ನ ಮುಂದಿರುವ ವ್ಯಕ್ತಿಯನ್ನು ನಿರ್ದೇಶಿಸುವ ಸರ್ವನಾಮಗಳನ್ನು ‘ಮಧ್ಯಮ ಪುರುಷ’ ಎನ್ನಲಾಗುತ್ತದೆ. ಉದಾ : ನೀನು, ನೀವು.

  5. ಇ. ಪ್ರಥಮ ಪುರುಷ : ಮಾತನಾಡುವವನಿಂದ ಹತ್ತಿರ ಅಥವಾ ದೂರವಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ನಿರ್ದೇಶಿಸುವ ಸರ್ವನಾಮಗಳನ್ನು ‘ಪ್ರಥಮ ಪುರುಷ’ ಎನ್ನಲಾಗುತ್ತದೆ.

  6. ಉದಾ : ಅವರು, ಅವನು, ಅವಳು, ಅದು, ಅವು, ಇವನು, ಇವಳು, ಇವರು, ಇದು.

  7. ೨. **ಆತ್ಮಾರ್ಥಕ ಸರ್ವನಾಮ :** ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ ಸರ್ವನಾಮ’ ಎನ್ನುತ್ತಾರೆ. ಉದಾ : ತಾನು, ತಾವು, ತನ್ನ, ತಮ್ಮ.

  8. ೩. **ಪ್ರಶ್ನಾರ್ಥಕ ಸರ್ವನಾಮ :** ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ.

  9. ಉದಾ : ಯಾವುವು? ಯಾವುದು? ಯಾರು? ಏತರದು? ಆವುದು?

ಅಭ್ಯಾಸ

  1. ಉದಾಹರಣೆಯಲ್ಲಿ ನೀಡಿರುವಂತೆ ಕೆಳಗಿನ ವಾಕ್ಯಗಳಲ್ಲಿ ಸರ್ವನಾಮಗಳನ್ನು ಗುರುತಿಸಿ, ಅವು ಯಾವ ರೀತಿಯ ಸರ್ವನಾಮಗಳೆಂದು ತಿಳಿಸಿ.

  2. (A table with columns for ಕ್ರಮ ಸಂಖ್ಯೆ, ವಾಕ್ಯಗಳು, ಸರ್ವನಾಮ ಪದಗಳು, and ಸರ್ವನಾಮದ ವಿಧ)

  3. ಉದಾ: ಕಷ್ಟ ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರೂ ಸಹಾಯ ಮಾಡಲಾರರು. | ನಾವು, ನಮಗೆ | ಉತ್ತಮ ಪುರುಷ ಸರ್ವನಾಮ

  4. ೧. ನೀನು ಸುಳ್ಳುಗಾರನೆಂದು ಗೊತ್ತಾದ ಮೇಲೆ ನೀನು ನಿಜ ಹೇಳಿದರೂ ನಿನ್ನನ್ನು ಯಾರೂ ನಂಬುವುದಿಲ್ಲ. | |

    Answer

    ನೀನು, ನಿನ್ನನ್ನು - ಮಧ್ಯಮ ಪುರುಷ ಸರ್ವನಾಮ

  5. ೨. ಅವನಿಗೆ ಅವನ ಅಕ್ಕ ಒಂದು ಪುಸ್ತಕ ಕೊಟ್ಟಳು. | |

    Answer

    ಅವನಿಗೆ, ಅವನ - ಪ್ರಥಮ ಪುರುಷ ಸರ್ವನಾಮ

  6. ೩. ಅವನು ತನ್ನ ಪುಸ್ತಕವನ್ನು ಬಹಳ ಮೆಚ್ಚಿಕೊಂಡನು. | |

    Answer

    ಅವನು - ಪ್ರಥಮ ಪುರುಷ ಸರ್ವನಾಮ ತನ್ನ - ಆತ್ಮಾರ್ಥಕ ಸರ್ವನಾಮ

  7. ೪. ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. | |

    Answer

    ನಮ್ಮ, ನಾವೇ - ಉತ್ತಮ ಪುರುಷ ಸರ್ವನಾಮ

  8. ೫. ನಾವು ಊರಿಗೆ ಹೋಗಿ ನಿಮ್ಮ ಸಾಮಾನುಗಳನ್ನೂ ಅವುಗಳನ್ನಿಟ್ಟಿರುವ ಪೆಟ್ಟಿಗೆಗಳನ್ನೂ ತರುತ್ತೇವೆ. | |

    Answer

    ನಾವು - ಉತ್ತಮ ಪುರುಷ ಸರ್ವನಾಮ ನಿಮ್ಮ - ಮಧ್ಯಮ ಪುರುಷ ಸರ್ವನಾಮ ಅವುಗಳನ್ನು - ಪ್ರಥಮ ಪುರುಷ ಸರ್ವನಾಮ

Interactive Lab

ತೀವ್ರಹೆಚ್ಚು; ಲಪ್ಪಟೆ-ತಲೆಗೆ ಸುತ್ತಿದಬಟ್ಟೆ; ಪಕ್ಕಾಗು-ಒಳಗಾಗು; ಎಂತಾ ವಗ-ಏನು ವಗು; ಚಂದ-ಚೆನ್ನಾಗಿ; ಪಡಪೋಶಿ-ಕೆಲಸಕ್ಕೆ ಬಾರದ; ಕರ್ಸಿದಾರೆ-ಕರೆಸಿದ್ದಾರೆ; ತಳಹದಿ-ಬುನಾದಿ; ಸಂವಾದಿಸು-ಮಾತನಾಡು, ಚರ್ಚೆಮಾಡು; ಕಂಬಳಿಗೊಪ್ಪೆ-ಮಳೆಯಿಂದ ರಕ್ಷಿಸಿಕೊಳ್ಳಲು ಕಂಬಳಿಯಿಂದ ಮಾಡಿದ ಮುಸುಕು; ಗೊರಬು, ತೆರವು-ಖಾಲಿ; ನಾಟಿ-ಪೈರಿನ ಸಸಿಗಳನ್ನು ನೆಡುವುದು; ನೀರಾವು-ನೀರಿನಲ್ಲಿ ಬದುಕುವ ಹಾವು; ಹೋತು-ಹೋಯಿತು; ಕದ-ಬಾಗಿಲು; ಹೊಡೆ-ಕಾಳು ತುಂಬುವ ಮುನ್ನ ಕಾಣುವ ಪೈರಿನ ತುದಿ; ತೆನೆ- ಕಾಳು ತುಂಬಿದ ಪೈರಿನ ತುದಿ