ಪದ್ಯ (poem) · ಜನಪದಗೀತೆ (Folk Song)
ಪಠ್ಯFull text
**ಚಿನ್ನುಡಿ** “ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ । ಪೆಣ್ಣಲ್ಲವೆ ಪೊರೆದವಳು। ಪೆಣ್ಣುಪೆಣ್ಣೆಂದೇತಕೆ ಬೀಳುಗಳೆವರು। ಕಣ್ಣು ಕಾಣದ ಗಾವಿಲರು” – ಸಂಚಿಯ ಹೊನ್ನಮ್ಮ (‘ಹದಿಬದೆಯ ಧರ್ಮ’ ಎಂಬ ಸಾಂಗತ್ಯ ಕೃತಿಯನ್ನು ರಚಿಸಿದ ಶತಮಾನದ ಕವಯಿತ್ರಿ) (Women are the mothers who gave birth to all, women are the ones who nourished us. Why do the blind fools degrade women? — A beautiful verse emphasizing the importance and respect owed to women.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ತವರು | — | ತಾಯಿಯ ಮನೆ; ಬಾಳೆ-ಬಾಳೆಯಗಿಡ; ಸೀಬೆ-ಪೇರಳೆ; ಮುತ್ತೈದೆ-ಮದುವೆಯಾದ ಹೆಣ್ಣು ; ಕಂಚು-ಒಂದು ಲೋಹ; ಮಿಂಚಾಡು-ಹೊಳೆಯುವುದು; ಗಿಣಿ-ಗಿಳಿ; ಆಲೆ-ಕಬ್ಬಿನ ರಸ ತೆಗೆಯುವ ಯಂತ್ರ, ಗಾಣ; ಸಾರಂಗ-ಮೈಮೇಲೆ ಚುಕ್ಕೆಗಳಿರುವ ಜಿಂಕೆ; ಪಗಡೆ- ಒಂದು ರೀತಿಯ ಆಟ; ನಟ್ಟ ನಡುವೆ- ಮಧ್ಯೆ; ಹಟ್ಟಿ-ಮನೆ; ಹಡೆದವ್ವ- ಹೆತ್ತ ತಾಯಿ; ಕೊಂಡೋಗು-ತೆಗೆದುಕೊಂಡುಹೋಗು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಬಳೆಗಾರ ಎಲ್ಲಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ?
Answerಬಳೆಗಾರ ತನ್ನವರಿಗೆ (ತವರಿಗೆ) ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ.
೨. ತಾಯಿಯ ಮನೆ ಯಾವ ರೀತಿ ಇದೆ?
Answerತಾಯಿಯ ಮನೆಯು ಹಂಚಿನ ಮನೆ, ಕಂಚಿನ ಕದ ಮತ್ತು ಮಿಂಚಾಡುವ ಎರಡು ಗಿಣಿಗಳಿಂದ ಕೂಡಿದೆ.
೩. ಚಪ್ಪರದ ನಡುವೆ ತಾಯಿ ಯಾವ ಆಟ ಆಡುತ್ತಾಳೆ?
Answerಚಪ್ಪರದ ನಡುವೆ ತಾಯಿ ಪಗಡೆಯ ಆಟ ಆಡುತ್ತಾಳೆ.
೪. ಹಡೆದವ್ವನಿಗೆ ಯಾವ ಬಣ್ಣದ ಬಳೆ ಎಂದರೆ ಆಸೆ?
Answerಹಡೆದವ್ವನಿಗೆ ಅಚ್ಚ ಕೆಂಪಿನ ಮತ್ತು ಹಸಿರು ಗೀರಿನ ಬಳೆ ಎಂದರೆ ಆಸೆ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ತವರು ಮನೆಗೆ ಹೋಗಲು ಗುರುತುಗಳೇನು?
Answerತವರು ಮನೆಗೆ ಹೋಗಲು ಗುರುತುಗಳೆಂದರೆ, ಬಾಳೆ ಮರವನ್ನು ಬಲಕ್ಕೆ ಬಿಟ್ಟು, ಸೀಬೆ ಮರವನ್ನು ಎಡಕ್ಕೆ ಬಿಟ್ಟು ನಟ್ಟನಡುವೆ ಹೋಗಬೇಕು. ಅಲ್ಲಿ ಆಲೆ ಆಡುತ್ತಿರುತ್ತದೆ, ಗಾಣ ತಿರುಗುತ್ತಿರುತ್ತದೆ, ನವಿಲು ಮತ್ತು ಸಾರಂಗಗಳು ನಲಿಯುತ್ತಿರುತ್ತವೆ. ಹಂಚಿನ ಮನೆ, ಕಂಚಿನ ಬಾಗಿಲು ಮತ್ತು ಮಿಂಚಾಡುವ ಎರಡು ಗಿಳಿಗಳು ಕಾಣುತ್ತವೆ.
೨. ತವರು ಮನೆ ನೋಡಲು ಹೇಗಿದೆ?
Answerತವರು ಮನೆಯು ಹಂಚಿನ ಮನೆಯಾಗಿದ್ದು, ಕಂಚಿನ ಬಾಗಿಲನ್ನು ಹೊಂದಿದೆ. ಅಲ್ಲಿ ಮಿಂಚಾಡುವ ಎರಡು ಗಿಳಿಗಳಿವೆ. ಮುತ್ತೈದೆಯರ ಹಟ್ಟಿಯಲ್ಲಿ ಮುತ್ತಿನ ಚಪ್ಪರ ಹಾಕಿ, ಅದರ ನಡುವೆ ತಾಯಿ ಪಗಡೆಯ ಆಟ ಆಡುತ್ತಿರುತ್ತಾಳೆ.
ಇ. ಈ ಪದ್ಯವನ್ನು ಗಟ್ಟಿಯಾಗಿ ಗುಂಪಿನಲ್ಲಿ ಹಾಡಿ.
ಈ. ಬಳೆಗಾರ ಮತ್ತು ಬಾಲೆಯ ಪಾತ್ರವನ್ನು ಹಂಚಿಕೊಂಡು ಇಬ್ಬಿಬ್ಬರು ರಾಗವಾಗಿ ಹಾಡಿ.
ಉ. ಕೆಳಗಿನ ವಾಕ್ಯಗಳಂತೆ ಅರ್ಥಕೊಡುವ ಸಾಲುಗಳನ್ನು ಪದ್ಯದಲ್ಲಿ ಗುರುತಿಸಿ.
೧. ನಿನ್ನ ತವರೂರು ನನಗೇನು ಗೊತ್ತು?
Answerನಿನ್ನ ತವರೂರ ನಾನೇನು ಬಲ್ಲೆನು
೨. ಅಲ್ಲಿದೆ ನನ್ನ ತವರೂರು.
Answerಅಲ್ಲಿಹುದೇ ನನ್ನ ತವರೂರು
೩. ನನ್ನ ತವರು ಮನೆಯ ಮಾಡು ಹಂಚಿನದು; ನನ್ನ ತವರು ಮನೆಯ ಬಾಗಿಲು ಕಂಚಿನದು.
Answerಹಂಚಿನ ಮನೆ ಕಾಣೋ ಕಂಚಿನ ಕದ ಕಾಣೋ
೪. ಎಲೈ ಬಳೆಗಾರನೇ, ನವಿಲು ಸಾರಂಗ ಅಲ್ಲಿ ಕುಣಿಯುತ್ತವೆ.
Answerನವಿಲು ಸಾರಂಗ ನಲಿತಾವೆ ಬಳೆಗಾರ
೫. ಬಳೆಗಾರ! ನನ್ನ ತಾಯಿ ಅವಳೇ.
Answerಅವಳೆ ಕಾಣೊ ಎನ್ನ ಹಡೆದವ್ವಾ
೬. ಬಳೆಗಳನ್ನು ನನ್ನ ತವರುಮನೆಗೆ ತೆಗೆದುಕೊಂಡು ಹೋಗು.
Answerಕೊಂಡೋಗೊ ಎನ್ನ ತವರಿಗೆ
೭. ನನ್ನ ತಾಯಿಗೆ ಅಚ್ಚ ಕೆಂಪಿನ ಹಸಿರು ಗೀರಿನ ಬಳೆ ಎಂದರೆ ತುಂಬಾ ಇಷ್ಟ.
Answerಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ ಎನ್ನ ಹಡೆದವ್ವೆ ಬಲು ಆಸೆ ಬಳೆಗಾರ
ಊ. ಈ ಪದ್ಯದಲ್ಲಿ ಮತ್ತೆ ಮತ್ತೆ ಬರುವ ಸಾಲುಗಳನ್ನು ಗುರುತಿಸಿ, ಅವು ಪದ್ಯದ ಅರ್ಥಕ್ಕೆ ಹೇಗೆ ಶಕ್ತಿ ಕೊಟ್ಟಿವೆ ಎಂದು ಗಮನಿಸಿ.
ಋ. ನಮ್ಮ ಮನೆಯ ಗುರುತನ್ನು ಇನ್ನೊಬ್ಬರಿಗೆ ತಿಳಿಸಲು ನಾವು ಸೂಚಿಸುವ ಸ್ಥಳಗಳನ್ನು ಈ ಪದ್ಯದ ಹೆಣ್ಣಿನ ಗುರುತಿನ ಮಾತುಗಳಿಗೆ ಹೋಲಿಸಿ.
ಭಾಷಾಭ್ಯಾಸ
ನುಡಿಗಟ್ಟು
ವಿಶೇಷಾರ್ಥವುಳ್ಳ ಮತ್ತು ಒಳಾರ್ಥವುಳ್ಳ ಪದಪುಂಜವನ್ನು ನುಡಿಗಟ್ಟು ಎನ್ನುವರು. ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಇರುವ ಮೂಲಸಾಮಗ್ರಿಯನ್ನೇ ಉಪಯೋಗಿಸಿ ಒಂದು ಹೊಸ ರೂಪವನ್ನು ಸೃಷ್ಟಿ ಮಾಡಲು ಅಥವಾ ಇರುವ ರೂಪಕ್ಕೆ ಹೊಸ ಅರ್ಥವನ್ನು ತಾತ್ಕಾಲಿಕವಾಗಿ ಹೊಂದಿಸಿ ಪ್ರಯೋಗಿಸಲು ಶಕ್ತರಾಗುತ್ತಾರೆ. ಅಂಥ ಪ್ರಯೋಗಗಳನ್ನು ನುಡಿಗಟ್ಟುಗಳೆಂದು ಗುರುತಿಸುವುದು ವಾಡಿಕೆ. ಅವರಿಬ್ಬರಿಗೆ ಎಣ್ಣೆ ಸೀಗೆ ಎಂದಾಗ, ಪರಸ್ಪರ ವಿರೋಧಿಗಳು ಎಂದರ್ಥ. ಇವನ್ನು ಎಣ್ಣೆ-ತುಪ್ಪ, ಸೀಗೆ-ತುಪ್ಪ ಎಂದಿತ್ಯಾದಿಯಾಗಿ ಉಪಯೋಗಿಸಲು ಬರುವುದಿಲ್ಲ. ಹಣ್ಣು ತಿನ್ನು, ರೊಟ್ಟಿ ತಿನ್ನು ಎಂದಿತ್ಯಾದಿ ರಚನೆಗಳನ್ನನುಸರಿಸಿ, ಪೆಟ್ಟು ತಿನ್ನು ಎಂಬುದೂ ಮೊದಲು ಚಮತ್ಕಾರಕ್ಕೋ ಹಾಸ್ಯಕ್ಕೋ ಆರಂಭವಾಗಿ ಆಕರ್ಷಕವಾಗಿದ್ದುದರಿಂದ ಸ್ಥಿರವಾಗಿ ಬಳಕೆಯಾಗುತ್ತಿದೆ. ಕಣ್ಣಿಗೆ ಬೀಳು, ಕಣ್ಣು ಬಂತು, ಬಾಲಬಿಚ್ಚು, ಮೂಗುತೂರಿಸು, ಹೊಟ್ಟುಕುಟ್ಟು, ತೋಟದೂರ, ಮೀಸೆ ಮಣ್ಣಾಗು, ಬೇಳೆಬೇಯೊಲ್ಲ, ಕಿವಿಕಚ್ಚು, ಹರಟೆಕೊಚ್ಚು, ಬೆಟ್ಟುಮಡಿಸು, ಟೋಪಿ ಹಾಕು, ಹುಬ್ಬು ಹಾರಿಸು, ತಾರಮ್ಮಯ್ಯ ಆಡು- ಮೊದಲಾದವು ಹೊಸಗನ್ನಡದಲ್ಲಿ ಬೆಳಕಿಗೆ ಬಂದಿರುವ ನುಡಿಗಟ್ಟುಗಳು.
ನುಡಿಗಟ್ಟುಗಳು ವ್ಯಾಕರಣ ನಿಯಮದ ಕಟ್ಟಿಗೆ ಒಳಗಾಗದೆ, ಒಂದು ಭಾಷೆಯನ್ನಾಡುವ ಜನರ ಅನುಭವ, ಅಗತ್ಯ ಹಾಗೂ ಸಂದರ್ಭಕ್ಕೆ ಸರಿಯಾಗಿ ರೂಪುಗೊಳ್ಳುತ್ತವೆ. ಆಕರ್ಷಕವಾಗಿ, ಸಶಕ್ತವಾಗಿದ್ದಲ್ಲಿ ಬಹುಕಾಲ ನೆಲೆ ನಿಲ್ಲುತ್ತವೆ. ಇಲ್ಲದಿದ್ದರೆ ಅಳಿಸಿ ಹೋಗುತ್ತ, ಮರುಹುಟ್ಟು ಪಡೆಯುತ್ತವೆ.
ಅ. ಕೆಳಕಂಡ ನುಡಿಗಟ್ಟುಗಳನ್ನು ಗಮನಿಸಿ :
೧. ಕಿಡಿಕಾರು (ಸಿಟ್ಟಿಗೇಳು): ದುರ್ಯೋಧನನನ್ನು ಕಾಣುತ್ತಲೇ ಭೀಮನು ಕಿಡಿಕಾರಿದನು.
೨. ತಲೆದೂಗು (ಒಪ್ಪು): ಯಕ್ಷಗಾನ ಪಾತ್ರಧಾರಿಯ ಕುಣಿತ ಕಂಡು ಪ್ರೇಕ್ಷಕರು ತಲೆದೂಗಿದರು.
೩. ಮುಖ ಅರಳು (ಸಂತೋಷವಾಗು): ತಾಯಿಯನ್ನು ಕಾಣುತ್ತಲೇ ಮಗುವಿನ ಮುಖ ಅರಳಿತು.
೪. ಮೇಲುಗೈ (ಗೆಲುವು): ಹಾಕಿ ಆಟದಲ್ಲಿ ಭಾರತದ ಮಹಿಳೆಯರು ಜಪಾನ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.
ಆ. ಕೆಳಗೆ ನೀಡಿರುವ ನುಡಿಗಟ್ಟುಗಳನ್ನು ಬಳಸಿ ವಾಕ್ಯ ರಚಿಸಿ :
೧. ಅಡ್ಡದಾರಿ ಹಿಡಿ (ತಪ್ಪು ಕೆಲಸ ಮಾಡು)
Answerಅಡ್ಡದಾರಿ ಹಿಡಿ: ಪರೀಕ್ಷೆಯಲ್ಲಿ ನಕಲು ಮಾಡುವುದು ಅಡ್ಡದಾರಿ ಹಿಡಿದಂತೆ.
೨. ಎತ್ತಿದ ಕೈ (ಪ್ರವೀಣ)
Answerಎತ್ತಿದ ಕೈ: ನನ್ನ ಅಣ್ಣ ಚಿತ್ರ ಬಿಡಿಸುವುದರಲ್ಲಿ ಎತ್ತಿದ ಕೈ.
೩. ನೀರಿಗೆ ಹಾಕು (ವ್ಯರ್ಥಮಾಡು)
Answerನೀರಿಗೆ ಹಾಕು: ಆಟವಾಡುತ್ತಾ ಸಮಯವನ್ನು ನೀರಿಗೆ ಹಾಕಬೇಡ.
೪. ಬೇರೂರು (ಸ್ಥಿರವಾಗಿರು)
Answerಬೇರೂರು: ಗಿಡ ನೆಟ್ಟ ನಂತರ ಅದು ಬೇರೂರಲು ನೀರು ಹಾಕಬೇಕು.
೫. ಮೈ ಬಗ್ಗಿಸು (ಶ್ರಮಪಡು)
Answerಮೈ ಬಗ್ಗಿಸು: ತರಗತಿಯಲ್ಲಿ ಮೊದಲ ಸ್ಥಾನ ಪಡೆಯಲು ನಾನು ಮೈ ಬಗ್ಗಿಸಿ ಓದಿದೆ.
ವ್ಯಾಕರಣ ಮಾಹಿತಿ
ಪತ್ರ ಲೇಖನ
ವಿದ್ಯಾರ್ಥಿಗಳೇ..... ನಾವು ನಿತ್ಯ ಜೀವನದಲ್ಲಿ ಅನೇಕ ಜನರೊಂದಿಗೆ ವಿವಿಧ ಕಾರಣಗಳಿಗಾಗಿ ಸಂಪರ್ಕವನ್ನು ಇಟ್ಟುಕೊಂಡಿರುತ್ತೇವೆ. ಜೊತೆಗೆ ಅನೇಕ ರೀತಿಯ ವ್ಯವಹಾರಗಳನ್ನೂ ಮಾಡುತ್ತೇವೆ. ಹೀಗಾಗಿ ಇಂದಿನ ಯುಗವನ್ನು ಸಂಪರ್ಕ ಯುಗವೆಂದೂ ಕರೆಯುತ್ತೇವೆ. ಹಿಂದಿನ ಕಾಲದಲ್ಲಿ ದೂರ ಇರುವವರೊಂದಿಗೆ ಪತ್ರಗಳ ಮೂಲಕ ಸಂಪರ್ಕವನ್ನು ಬೆಳೆಸುತ್ತಿದ್ದೆವು. ಆದರೆ, ಇಂದು ಆಧುನಿಕ ಮಾಧ್ಯಮಗಳಾದ ಮೊಬೈಲ್, ಇ-ಅಂಚೆ ಮೂಲಕ ದೂರದವರೊಂದಿಗೆ ಸಂಪರ್ಕವನ್ನು ಬೆಸೆಯುತ್ತೇವೆ. ಮಾಧ್ಯಮ ಯಾವುದಾದರೂ ಪತ್ರಗಳನ್ನು ಬರೆಯುವ ಕ್ರಮದಲ್ಲಿ ಅಂತಹ ಮಹತ್ವದ ಬದಲಾವಣೆಗಳು ಆಗಿಲ್ಲ. ಹೀಗಾಗಿ ಪತ್ರ ಬರೆಯುವ ಕ್ರಮಗಳನ್ನು ನಾವು ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕು. ಪತ್ರಗಳು ಸಾಹಿತ್ಯಾತ್ಮಕ ಗುಣಗಳನ್ನು ಹೊಂದಿರುವುದರಿಂದ ಅವುಗಳನ್ನು ‘ಸಂದೇಶ ಸಾಹಿತ್ಯ’ ಎಂದೂ ಕರೆಯುತ್ತೇವೆ.
ಪತ್ರದ ಅರ್ಥ :
ನಮ್ಮ ಭಾವನೆಗಳನ್ನು, ವಿಚಾರಗಳನ್ನು, ಅನುಭವಗಳನ್ನು, ಬೇಕು-ಬೇಡಗಳನ್ನು ಲಿಖಿತ ರೂಪದಲ್ಲಿ ಮತ್ತೊಬ್ಬರಿಗೆ ತಿಳಿಸುವ ವ್ಯಾವಹಾರಿಕ ಮಾಧ್ಯಮವೇ ಪತ್ರಲೇಖನ.
ಉತ್ತಮ ಪತ್ರದ ಸ್ವರೂಪ ಹಾಗೂ ಲಕ್ಷಣಗಳು :
ಪತ್ರ ಬರೆಯುವುದು ಒಂದು ಕಲೆ. ಪತ್ರಗಳು ಬಹು ಕಾಲ ಉಳಿಯುವ ದಾಖಲೆಗಳು ಅಷ್ಟೇ ಅಲ್ಲ, ಪತ್ರಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬಗಳು ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೇ ಬಗೆಯ ಪತ್ರವಾಗಿರಲಿ ಕೆಲವು ಸಾಮಾನ್ಯ ನಿಯಮಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ನಮಗೆ ಉತ್ತಮ ಪತ್ರದ ಸ್ವರೂಪ ಹಾಗೂ ಲಕ್ಷಣಗಳು ತಿಳಿದಿರಬೇಕು.
೧. ಪತ್ರಗಳು ಲಿಖಿತ ರೂಪದಲ್ಲಿರುತ್ತವೆ.
೨. ಪತ್ರ ವ್ಯವಹಾರವು ಇಬ್ಬರು ವ್ಯಕ್ತಿ ಅಥವಾ ಎರಡು ಸಂಘ ಸಂಸ್ಥೆಗಳ ನಡುವೆ ನಡೆಯುತ್ತದೆ.
೩. ಪತ್ರದ ಭಾಷೆ – ಸರಳವಾಗಿರಬೇಕು, ಸ್ಪಷ್ಟವಾಗಿರಬೇಕು, ನೇರವಾಗಿರಬೇಕು, ಬರವಣಿಗೆ ಅಂದವಾಗಿರಬೇಕು ಹಾಗೂ ಕಾಗುಣಿತ ದೋಷಗಳಿಂದ ಮುಕ್ತವಾಗಿರಬೇಕು.
೪. ಪತ್ರದ ವಿಷಯ ಮತ್ತು ಶೈಲಿ – ಪತ್ರದ ವಿಚಾರಗಳು ಅರ್ಥಪೂರ್ಣವೂ ನೇರವೂ ಸಂಕ್ಷಿಪ್ತವೂ ಆಗಿರಬೇಕು, ಶೈಲಿ ಆಕರ್ಷಕವಾಗಿರಬೇಕು ಹಾಗೂ ಕ್ರಮಬದ್ಧವಾಗಿರಬೇಕು.
೫. ಪತ್ರದ ಆರಂಭ ಮತ್ತು ಮುಕ್ತಾಯದ ಒಕ್ಕಣೆ – ಪತ್ರವನ್ನು ಯಾರಿಗೆ ಬರೆಯುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪತ್ರದ ಆರಂಭ ಮತ್ತು ಕೊನೆಯಲ್ಲಿ ಸೂಕ್ತವಾದ ಸಂಬೋಧನೆಗಳನ್ನು ಬಳಸಬೇಕು. ಸಂಬೋಧನೆ ಸರಿ ಇಲ್ಲದಿದ್ದರೆ ಓದುಗರಿಗೆ ಕಿರಿಕಿರಿ ಉಂಟಾಗುತ್ತದೆ.
೬. ವಿಳಾಸ – ಪತ್ರ ಯಾರಿಂದ, ಯಾರಿಗೆ ಬರೆಯಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಿಗದಿತ ಜಾಗದಲ್ಲಿ ಪೂರ್ಣ ವಿಳಾಸದೊಂದಿಗೆ ಬರೆಯಬೇಕು. ಇಲ್ಲದಿದ್ದರೆ ಪತ್ರ ತಲುಪದೆ ಕಳೆದುಹೋಗುವ ಸಾಧ್ಯತೆಗಳಿರುತ್ತವೆ.
೭. ಪತ್ರಗಳಲ್ಲಿ ದಿನಾಂಕ ಮತ್ತು ಪತ್ರ ಬರೆದವರ ಸಹಿ ಇರಬೇಕು. ಸಹಿ ಇರದ ಪತ್ರಗಳಿಗೆ ಬೆಲೆ ಇರುವುದಿಲ್ಲ.
ಪತ್ರದ ವಿಧಗಳು :
ನಾವು ನಮ್ಮ ಜೀವನದಲ್ಲಿ ಹಲವರಿಗೆ ಪತ್ರವನ್ನು ಬರೆಯುತ್ತೇವೆ. ತಂದೆ ತಾಯಿಯರಿಗೆ, ಅಕ್ಕ ತಂಗಿಯರಿಗೆ, ಅಣ್ಣ ತಮ್ಮಂದಿರಿಗೆ, ಬಂಧು ಮಿತ್ರರಿಗೆ, ಸಾರ್ವಜನಿಕ ಸಂಸ್ಥೆಗಳಿಗೆ ಪತ್ರಗಳನ್ನು ಒಂದಲ್ಲಾ ಒಂದು ಕಾರಣಕ್ಕೆ ಬರೆಯುತ್ತಿರುತ್ತೇವೆ. ಪತ್ರಗಳನ್ನು ಯಾರಿಗೆ ಬರೆಯುತ್ತಿದ್ದೇವೆ ಎಂಬುದನ್ನು ಆಧರಿಸಿ ಪತ್ರಗಳನ್ನು ಮುಖ್ಯವಾಗಿ ೨ ವಿಧಗಳಾಗಿ ವಿಂಗಡಿಸಲಾಗುತ್ತದೆ.
೧. ಖಾಸಗಿ ಪತ್ರಗಳು
೨. ವ್ಯಾವಹಾರಿಕ ಪತ್ರಗಳು
೧. ಖಾಸಗಿ ಪತ್ರಗಳು/ ವೈಯಕ್ತಿಕ ಪತ್ರಗಳು / ಅನೌಪಚಾರಿಕ ಪತ್ರಗಳು :
ನಾವು ನಮ್ಮ ನೋವು ನಲಿವು, ಸುಖ ಸಂತೋಷ, ಆರೋಗ್ಯ, ಉದ್ಯೋಗ, ವ್ಯಾಸಂಗ ಇತ್ಯಾದಿ ವಿಚಾರಗಳನ್ನು ಆಪ್ತರೊಂದಿಗೆ ಅಂದರೆ, ತಂದೆತಾಯಿ, ಅಕ್ಕತಂಗಿ, ಅಣ್ಣತಮ್ಮ, ಅತ್ತೆಮಾವ, ಗಂಡಹೆಂಡತಿ, ಅತ್ತೆಸೊಸೆ, ಮಾವಅಳಿಯ, ಗುರುಶಿಷ್ಯ, ಬಂಧುಮಿತ್ರರು ಹೀಗೆ ಹಲವರೊಂದಿಗೆ ಹಂಚಿಕೊಳ್ಳುತ್ತೇವೆ. ಖಾಸಗಿ ಪತ್ರಗಳು ಪರಸ್ಪರ ಯೋಗಕ್ಷೇಮ ವಿಚಾರಣೆ, ಮಳೆಬೆಳೆ, ಸಾಂಸಾರಿಕ ಸಂಗತಿಗಳನ್ನು ಒಳಗೊಂಡಿರುತ್ತವೆ. ಇಂತಹ ಪತ್ರಗಳಲ್ಲಿ ಔಪಚಾರಿಕ ಅಂಶಗಳು ಕಡಿಮೆ ಇರುತ್ತವೆ. ಹೀಗಾಗಿ ಬಂಧುಮಿತ್ರರೊಂದಿಗೆ ವೈಯಕ್ತಿಕ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವ ಸಲುವಾಗಿ ಬರೆಯುವ ಪತ್ರಗಳನ್ನು ಖಾಸಗಿ ಪತ್ರಗಳು ಎನ್ನುತ್ತೇವೆ.
ಖಾಸಗಿ ಪತ್ರಗಳನ್ನು ಬಿಳಿ ಹಾಳೆಯಲ್ಲಿ ಬರೆದು ಒಂದು ಕವರಿನಲ್ಲಿ ಹಾಕಿ ಕಳುಹಿಸಬೇಕು. ಇಲ್ಲವೇ ಅಂತರ್ದೇಶೀಯ ಪತ್ರಗಳನ್ನು ಬಳಸಬಹುದು. ತೀರಾ ಖಾಸಗಿ ಅಲ್ಲದ, ಸಂಕ್ಷಿಪ್ತ ವಿಚಾರಗಳಿದ್ದರೆ ಅಂಚೆ ಕಾರ್ಡ್ ಬಳಸಿ ಬರೆಯಬಹುದು.
೨. ವ್ಯಾವಹಾರಿಕ ಪತ್ರಗಳು / ಮನವಿ ಪತ್ರಗಳು / ಔಪಚಾರಿಕ ಪತ್ರಗಳು :
ಸಾರ್ವಜನಿಕ ಸಂಸ್ಥೆಗಳಾದ ಶಾಲೆ, ಆಸ್ಪತ್ರೆ, ನಗರಸಭೆ, ಬ್ಯಾಂಕ್, ಸರ್ಕಾರಿ ಕಛೇರಿಗಳು, ಸಂಘ ಸಂಸ್ಥೆಗಳು ಇತ್ಯಾದಿಗಳೊಂದಿಗೆ ಪತ್ರ ವ್ಯವಹಾರಗಳನ್ನು ಮಾಡುತ್ತಿರುತ್ತೇವೆ. ಇಲ್ಲಿಯ ಅಧಿಕಾರಿಗಳು ನಿಯಮಾನುಸಾರ ಕೆಲಸಗಳನ್ನು ನಿರ್ವಹಿಸುತ್ತಾರೆ. ಸಾರ್ವಜನಿಕರು ಪತ್ರಗಳ ಮೂಲಕ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ.
ಸಾರ್ವಜನಿಕ ಸಂಸ್ಥೆ ಅಥವಾ ಇಲಾಖೆಗಳ ಆಗು ಹೋಗುಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳನ್ನು ಅನುಸರಿಸಿ ಬರೆಯಲ್ಪಡುವ ಪತ್ರಗಳನ್ನು ವ್ಯಾವಹಾರಿಕ ಪತ್ರಗಳು ಎನ್ನುತ್ತೇವೆ. ನೀಡಿರುವ ವ್ಯಾವಹಾರಿಕ ಪತ್ರವನ್ನು ಗಮನಿಸಿ.
ದಿನಾಂಕ ೨೦-೦೨-೨೦೨೪
ಇವರಿಂದ,
ಚಿನ್ಮಯ ಜಿ.ಎಂ.
೭ನೇ ತರಗತಿ, 'ಎ' ವಿಭಾಗ,
ಜವಾಹರ ನವೋದಯ ಶಾಲೆ
ಧಾರವಾಡ.
ಇವರಿಗೆ,
ತರಗತಿ ಅಧ್ಯಾಪಕರು
ಜವಾಹರ ನವೋದಯ ಶಾಲೆ
ಧಾರವಾಡ.
ಮಾನ್ಯರೆ,
ವಿಷಯ : ಎರಡು ದಿನ ರಜೆ ನೀಡುವಂತೆ ಕೋರಿ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ನನ್ನ ಅಕ್ಕನ ಮದುವೆಯು ದಿನಾಂಕ ೨೨-೦೨-೨೦೨೪ ಹಾಗೂ ೨೩-೦೨-೨೦೨೪ ರಂದು ಬೆಳಗಾವಿಯಲ್ಲಿ ನೆರವೇರುತ್ತಿದೆ. ಈ ಸಂಭ್ರಮದಲ್ಲಿ ನಾನೂ ಅಗತ್ಯವಾಗಿ ಪಾಲ್ಗೊಳ್ಳಬೇಕಾಗಿದೆ. ಆದುದರಿಂದ ದಯವಿಟ್ಟು ಮೇಲ್ಕಾಣಿಸಿದ ಎರಡು ದಿನಗಳಿಗೆ ರಜೆಯನ್ನು ನೀಡಬೇಕೆಂದು ವಿನಂತಿಸುತ್ತೇನೆ.
ನಮಸ್ಕಾರಗಳೊಂದಿಗೆ,
ತಮ್ಮ ವಿಧೇಯ ವಿದ್ಯಾರ್ಥಿ
ಸಹಿ
(ಚಿನ್ಮಯ ಜಿ.ಎಂ.)