CRECT Education

Class 7 Kannada Lesson 6: Meeting of Friends | KTBS Second Language – Learn the Story

Description

Walk through the Akbar-Birbal story of friendship and clever disguise, with key vocabulary.

ಗದ್ಯ (prose) · ಸಂಪಾದಿತ

ಪಠ್ಯFull text

ಅಕ್ಬರ್, ಬೀರಬಲ್, ದೊರೆ ಮಂತ್ರಿಯಾಗಿದ್ದಂತೆ ಆತ್ಮೀಯ ಮಿತ್ರರೂ ಆಗಿದ್ದರು. ಒಮ್ಮೆ ಅಕ್ಬರ್ ಮಹಾಶಯನಿಗೆ ಬೀರಬಲ್ಲನ ಮೇಲೆ ಯಾವುದೋ ಕಾರಣಕ್ಕೆ ಅಸಮಾಧಾನ ಉಂಟಾಯಿತು. “ನಿನ್ನ ಮುಖವನ್ನು ತೋರಿಸಬೇಡ, ಎಲ್ಲಿಗಾದರೂ ಹೊರಟು ಹೋಗು” ಎಂದು ಬೀರಬಲ್‍ಗೆ ಆದೇಶಿಸಿದ. ಅಂದಿನಿಂದ ಬೀರಬಲ್ ಯಾರಿಗೂ ಕಾಣದಂತೆ ಮರೆಯಾದ. (Illustration of Akbar sitting on his throne, talking to a sadhu holding a kamandalu, with other courtiers around them in the palace) ಕೆಲ ದಿನಗಳ ನಂತರ ಅಕ್ಬರನಿಗೆ ಬೀರಬಲ್ಲನನ್ನು ಕಾಣುವ ತವಕ ಉಂಟಾಯಿತು. ಅವನಿಗಾಗಿ ಹುಡುಕಾಡಿಸಿದ. ಬೀರಬಲ್ ಎಲ್ಲಿಯೂ ಸಿಗಲಿಲ್ಲ. “ಎಂಥ ಕೆಲಸ ಆಗಿಹೋಯಿತು.” ಎಂದು ಅಕ್ಬರ್ ಚಿಂತಿಸತೊಡಗಿದ. ಒಮ್ಮೆ ಅಕ್ಬರ್ ದರ್ಬಾರ್ ನಡೆಸುತ್ತಿರುವಾಗ ಸೇವಕನೊಬ್ಬ ಒಳಬಂದು “ಪ್ರಭು! ಅರಮನೆಯ ದ್ವಾರದಲ್ಲಿ ಒಬ್ಬ ಸಾಧು ಬಂದಿದ್ದಾರೆ. ಅವರ ಶಿಷ್ಯರು ಆ ಸಾಧು ವಿಶ್ವದಲ್ಲಿಯೇ ದೊಡ್ಡ ಮೇಧಾವಿ ಹಾಗೂ ತುಂಬಾ ಬುದ್ಧಿವಂತರೆಂದು ಹೇಳುತ್ತಿದ್ದಾರೆ” ಎಂದು ಹೇಳಿದ. ಅಕ್ಬರ್ ತಕ್ಷಣವೇ ಆ ಸಾಧುವನ್ನು ಬರಮಾಡಿಕೊಂಡನು. ಅರಮನೆಯನ್ನು ಪ್ರವೇಶಿಸಿದ ಸಾಧು ತುಂಬಾ ತೇಜಸ್ವಿಯಾಗಿದ್ದ. ಅದೇ ಅವನೊಬ್ಬ ಬುದ್ಧಿವಂತನೆಂಬುದನ್ನು ಸಾರುತ್ತಿತ್ತು. “ಸಾಧು ! ನೀನು ಬಹಳ ಬುದ್ಧಿವಂತನೆಂದು ಕೇಳಿದೆ. ನಿನ್ನನ್ನು ಪರೀಕ್ಷಿಸುವ ಸಲುವಾಗಿ ಆಸ್ಥಾನದ ಪಂಡಿತರು ನಿನಗೆ ಪ್ರಶ್ನೆಗಳನ್ನು ಕೇಳಲು ಹೇಳುತ್ತೇನೆ. ಸರಿಯಾಗಿ ಉತ್ತರಿಸಿದರೆ ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತೇನೆ” ಎಂದನು ಅಕ್ಬರ್. ಆ ಮಾತಿಗೆ ಸಾಧು ಆಗಬಹುದು ಎಂದನು. ಅಕ್ಬರನ ಆಸ್ಥಾನದಲ್ಲಿ ತಾನ್‍ಸೇನ್, ತೋದರಮಲ್ಲ, ಅಬುಲ್ ಫಜಲ್, ಫೈಜಿ ಮೊದಲಾದ ವಿದ್ವಾಂಸರಿದ್ದರು. ಅವರು ಪ್ರಶ್ನಿಸತೊಡಗಿದರು. ಮೊದಲಿಗೆ... **ಅಬುಲ್ ಫಜಲ್** : ಕಳೆದುಹೋದುದನ್ನು ಮತ್ತೆ ಪಡೆಯಲಾಗದ್ದು ಯಾವುದು? **ಸಾಧು** : ಜೀವ, ಅವಕಾಶ, ಸಮಯ. **ತೋದರಮಲ್ಲ** : ಜಗತ್ತಿನಲ್ಲಿ ಅತ್ಯುತ್ತಮನಾದ ಸ್ನೇಹಿತನಾರು? **ಸಾಧು** : ಯುಕ್ತಾಯುಕ್ತ ಪರಿಜ್ಞಾನ, ವ್ಯಕ್ತಿಯ ಮುಂದಾಲೋಚನೆ. **ಫೈಜಿ** : ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು? **ಸಾಧು** : ಜ್ಞಾನ (ವಿದ್ವಾಂಸರು ಕೇಳಿದ ಪ್ರಶ್ನೆಗಳಿಗೆ ಸಾಧು ಸರಾಗವಾಗಿ ಉತ್ತರಿಸುತ್ತಿದ್ದ) **ಮಾನ್‍ಸಿಂಗ್** : ಒಬ್ಬ ವ್ಯಕ್ತಿಯ ಅತ್ಯುತ್ತಮವಾದ ಸಾಮರ್ಥ್ಯ ಯಾವುದು? ಮಾರುತಕ್ಕಿಂತ ವೇಗವಾದುದು ಯಾವುದು? ಅತ್ಯಂತ ಸಿಹಿಯಾದುದು ಯಾವುದು? ಎಂದು ಪ್ರಶ್ನೆಗಳ ಸುರಿಮಳೆಗರೆದ. **ಸಾಧು** : ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ ಆತನ ಧೈರ್ಯ; ಮಾರುತಕ್ಕಿಂತ ವೇಗವಾದುದು ಮನುಷ್ಯನ ಕಲ್ಪನೆ; ಅತ್ಯಂತ ಸಿಹಿಯಾದದ್ದು ಮಗುವಿನ ನಗು. **ತಾನ್‍ಸೇನ್** : ಸಂಗೀತದಲ್ಲಿ ಅವಿನಾಶಿ ಯಾವುದು? **ಸಾಧು** : ಸ್ವರಗಳು. ವಿದ್ವಾಂಸರೆಲ್ಲರು ಸಾಧುವಿನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡರು. ಅನಂತರ ಅಕ್ಬರನೇ ಪ್ರಶ್ನಿಸತೊಡಗಿದ.... **ಅಕ್ಬರ್** : ರಾಜ್ಯಭಾರ ನಡೆಸುವಲ್ಲಿ ನೆರವಾಗುವ ಅತ್ಯಂತ ಮುಖ್ಯವಾದ ಅಂಶ ಯಾವುದು? **ಸಾಧು** : ಕೌಶಲ. **ಅಕ್ಬರ್** : ರಾಜನ ದೊಡ್ಡ ಶತ್ರು ಯಾರು? **ಸಾಧು** : ಸ್ವಾರ್ಥ. (Illustration of the sadhu taking off his beard disguise in front of Akbar and his courtiers) ಅಕ್ಬರ್ ಚಕ್ರವರ್ತಿ ಸಾಧುವಿನ ಉತ್ತರದಿಂದ ಸಂತಸಪಟ್ಟ. ಅವನಿಗೆ ತನ್ನ ಆಸ್ಥಾನದಲ್ಲಿ ಒಂದು ಸ್ಥಾನವನ್ನು ಕೊಡುವುದಾಗಿ ಹೇಳಿದ. ನಂತರ, “ಅಯ್ಯಾ ! ಸಾಧುಗಳಿಗೆ ವಿಶೇಷ ಶಕ್ತಿಗಳಿರುತ್ತವೆ ಎಂದು ಕೇಳಿದ್ದೇನೆ. ನಿನಗೆ ಅಂಥ ಯಾವುದಾದರೂ ಶಕ್ತಿ ಇದೆಯೇ?” ಎಂದು ಅಕ್ಬರ್ ಕೇಳಿದನು. ಆಗ ಸಾಧು, “ಹೌದು! ತಾವು ಯಾರನ್ನಾದರೂ ನೋಡುವ ಇಚ್ಛೆ ಇದ್ದರೆ ಅವರನ್ನು ನಿಮ್ಮ ಕಣ್ಮುಂದೆ ಕ್ಷಣಮಾತ್ರದಲ್ಲಿ ತಂದು ನಿಲ್ಲಿಸಬಲ್ಲೆ” ಎಂದನು. ಹಾಗಿದ್ದರೆ “ನನ್ನ ಮಂತ್ರಿ ಬೀರಬಲ್ ಕಾಣೆಯಾಗಿದ್ದಾನೆ. ಅವನನ್ನು ಕರೆದು ತಾ ನೋಡೋಣ” ಎಂದ ಅಕ್ಬರ್. ಸಾಧು ನಿಧಾನವಾಗಿ ತನ್ನ ಗಡ್ಡ ಮೀಸೆಗಳನ್ನು ಕಳಚಿದ. ಎದುರಿಗೆ ಬೀರಬಲ್ ನಿಂತಿದ್ದ. ಸಾಧುವಿನ ವೇಷದಲ್ಲಿ ಬಂದಿದ್ದವನು ಅವನೇ. ಅಕ್ಬರನಿಗೆ ಸಂತೋಷವಾಯಿತು. “ನಿನ್ನ ಉತ್ತರಗಳಿಂದಲೇ ನಿನ್ನನ್ನು ಬೀರಬಲ್ ಎಂದು ಗುರುತಿಸಿದ್ದೆ. ಅದಕ್ಕೆ ಈ ಪ್ರಶ್ನೆ ಹಾಕಿದೆ. ಇನ್ನೆಂದೂ ನನ್ನ ಬಿಟ್ಟು ಹೋಗಬೇಡ” ಎಂದು ಮಿತ್ರನನ್ನು ಆತ್ಮೀಯತೆಯಿಂದ ಅಪ್ಪಿಕೊಂಡನು. ಗೆಳೆತನವೆ ಇಹಲೋಕಕ್ಕಿರುವ ಅಮೃತ. ಗೆಳೆತನವೆ ಚಿರಬಾಳ ಸಂಜೀವಿನಿ.

**ಗೆಳೆತನವೆ ಇಹಲೋಕಕ್ಕಿರುವ ಅಮೃತ. ಗೆಳೆತನವೆ ಚಿರಬಾಳ ಸಂಜೀವಿನಿ.** (Friendship is the nectar of this world. Friendship is the elixir of a long life.)

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅವಿನಾಶಿ - ನಾಶವಿಲ್ಲದ್ದು

  2. ಆಜ್ಞೆ - ಅಪ್ಪಣೆ

  3. ಕೌಶಲ - ಜಾಣತನ, ನಿಪುಣತೆ

  4. ತೇಜಸ್ವಿ - ತೇಜಸ್ಸುಳ್ಳವ; ಕಾಂತಿಯುಳ್ಳವ.

  5. ದ್ವಾರ - ಬಾಗಿಲು

  6. ಮಿತ್ರ - ಸ್ನೇಹಿತ; ಗೆಳೆಯ.

  7. ಸಮಾಗಮ - ಸೇರುವುದು

  8. ಅಸಮಾಧಾನ - ಬೇಸರ; ಅತೃಪ್ತಿ.

  9. ಆಲಂಗಿಸು - ಅಪ್ಪಿಕೊಳ್ಳು

  10. ತವಕ - ಆತುರ; ಕಾತರ.

  11. ದರ್ಬಾರು - ರಾಜಾಸ್ಥಾನ; ಅಧಿಕಾರ ನಡೆಸುವಿಕೆ.

  12. ಮಾರುತ - ಗಾಳಿ

  13. ರಾಜ್ಯಭಾರ - ರಾಜ್ಯದ ಹೊಣೆಗಾರಿಕೆ; ಆಳ್ವಿಕೆ.

  14. ಸ್ವಾರ್ಥ - ಸ್ವಹಿತ; ಸ್ವಪ್ರಯೋಜನ.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಅಕ್ಬರ್ ಮತ್ತು ಬೀರಬಲ್ ಇವರ ನಡುವಿನ ಸಂಬಂಧ ಯಾವ ರೀತಿಯದು?

    Answer

    ಅಕ್ಬರ್ ಮತ್ತು ಬೀರಬಲ್ ದೊರೆ ಮಂತ್ರಿಯಾಗಿದ್ದಂತೆ ಆತ್ಮೀಯ ಮಿತ್ರರೂ ಆಗಿದ್ದರು.

  2. ೨. ಅಕ್ಬರ್ ಬೀರಬಲ್ಲನನ್ನು ಏಕೆ ಹುಡುಕಾಡಿಸಿದನು?

    Answer

    ಅಕ್ಬರನಿಗೆ ಬೀರಬಲ್ಲನನ್ನು ಕಾಣುವ ತವಕ ಉಂಟಾದ್ದರಿಂದ ಅವನಿಗಾಗಿ ಹುಡುಕಾಡಿಸಿದನು.

  3. ೩. ಅರಮನೆಯನ್ನು ಪ್ರವೇಶಿಸಿದ ಸಾಧು ಹೇಗಿದ್ದನು?

    Answer

    ಅರಮನೆಯನ್ನು ಪ್ರವೇಶಿಸಿದ ಸಾಧು ತುಂಬಾ ತೇಜಸ್ವಿಯಾಗಿದ್ದನು.

  4. ೪. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರುಗಳೇನು?

    Answer

    ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳೆಂದರೆ ತಾನ್‍ಸೇನ್, ತೋದರಮಲ್ಲ, ಅಬುಲ್ ಫಜಲ್, ಫೈಜಿ ಮತ್ತು ಮಾನ್‍ಸಿಂಗ್.

  5. ೫. ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು?

    Answer

    ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಜ್ಞಾನ.

  6. ೬. ಕಳೆದು ಹೋದವುಗಳನ್ನು ಮತ್ತೆ ಪಡೆಯಲು ಸಾಧ್ಯವಾಗದೇ ಇರುವವು ಯಾವುವು?

    Answer

    ಕಳೆದುಹೋದವುಗಳನ್ನು ಮತ್ತೆ ಪಡೆಯಲು ಸಾಧ್ಯವಾಗದೇ ಇರುವವು ಜೀವ, ಅವಕಾಶ ಮತ್ತು ಸಮಯ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಬೀರಬಲ್ ಅಕ್ಬರನಿಗೆ ಕಾಣದಂತೆ ಏಕೆ ಮರೆಯಾಗಿದ್ದನು?

    Answer

    ಅಕ್ಬರ್ ಮಹಾಶಯನಿಗೆ ಬೀರಬಲ್ಲನ ಮೇಲೆ ಯಾವುದೋ ಕಾರಣಕ್ಕೆ ಅಸಮಾಧಾನ ಉಂಟಾಯಿತು. ಆಗ ಅಕ್ಬರ್ “ನಿನ್ನ ಮುಖವನ್ನು ತೋರಿಸಬೇಡ, ಎಲ್ಲಿಗಾದರೂ ಹೊರಟು ಹೋಗು” ಎಂದು ಆದೇಶಿಸಿದನು. ಆದ್ದರಿಂದ ಬೀರಬಲ್ ಅಕ್ಬರನಿಗೆ ಕಾಣದಂತೆ ಮರೆಯಾಗಿದ್ದನು.

  2. ೨. ಸೇವಕನು ಸಾಧುವಿನ ಬಗ್ಗೆ ಅಕ್ಬರನಲ್ಲಿಗೆ ಬಂದು ಏನೆಂದು ಹೇಳಿದನು?

    Answer

    ಸೇವಕನು ಅಕ್ಬರನಲ್ಲಿಗೆ ಬಂದು, “ಪ್ರಭು! ಅರಮನೆಯ ದ್ವಾರದಲ್ಲಿ ಒಬ್ಬ ಸಾಧು ಬಂದಿದ್ದಾರೆ. ಅವರ ಶಿಷ್ಯರು ಆ ಸಾಧು ವಿಶ್ವದಲ್ಲಿಯೇ ದೊಡ್ಡ ಮೇಧಾವಿ ಹಾಗೂ ತುಂಬಾ ಬುದ್ಧಿವಂತರೆಂದು ಹೇಳುತ್ತಿದ್ದಾರೆ” ಎಂದು ಹೇಳಿದನು.

  3. ೩. ಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್ ಹೇಳಿದುದೇನು?

    Answer

    ಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್, “ಸಾಧು ! ನೀನು ಬಹಳ ಬುದ್ಧಿವಂತನೆಂದು ಕೇಳಿದೆ. ನಿನ್ನನ್ನು ಪರೀಕ್ಷಿಸುವ ಸಲುವಾಗಿ ಆಸ್ಥಾನದ ಪಂಡಿತರು ನಿನಗೆ ಪ್ರಶ್ನೆಗಳನ್ನು ಕೇಳಲು ಹೇಳುತ್ತೇನೆ. ಸರಿಯಾಗಿ ಉತ್ತರಿಸಿದರೆ ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತೇನೆ” ಎಂದು ಹೇಳಿದನು.

  4. ೪. ಮಾನ್‍ಸಿಂಗ್‍ನ ಪ್ರಶ್ನೆಗಳಿಗೆ ಸಾಧುವಿನ ಉತ್ತರಗಳೇನು?

    Answer

    ಮಾನ್‍ಸಿಂಗ್‍ನ ಪ್ರಶ್ನೆಗಳಿಗೆ ಸಾಧು, ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ ಆತನ ಧೈರ್ಯ; ಮಾರುತಕ್ಕಿಂತ ವೇಗವಾದುದು ಮನುಷ್ಯನ ಕಲ್ಪನೆ; ಅತ್ಯಂತ ಸಿಹಿಯಾದದ್ದು ಮಗುವಿನ ನಗು ಎಂದು ಉತ್ತರಿಸಿದನು.

  5. ೫. ಸಾಧುವಿನ ಉತ್ತರಗಳಿಂದ ಸಂತಸಪಟ್ಟ ಅಕ್ಬರ್ ಏನು ಹೇಳಿದನು?

    Answer

    ಸಾಧುವಿನ ಉತ್ತರಗಳಿಂದ ಸಂತಸಪಟ್ಟ ಅಕ್ಬರ್, ಅವನಿಗೆ ತನ್ನ ಆಸ್ಥಾನದಲ್ಲಿ ಒಂದು ಸ್ಥಾನವನ್ನು ಕೊಡುವುದಾಗಿ ಹೇಳಿದನು. ನಂತರ, “ಅಯ್ಯಾ ! ಸಾಧುಗಳಿಗೆ ವಿಶೇಷ ಶಕ್ತಿಗಳಿರುತ್ತವೆ ಎಂದು ಕೇಳಿದ್ದೇನೆ. ನಿನಗೆ ಅಂಥ ಯಾವುದಾದರೂ ಶಕ್ತಿ ಇದೆಯೇ?” ಎಂದು ಕೇಳಿದನು.

  6. ೬. ಅಕ್ಬರನಿಗೆ ಸಾಧು ತನ್ನ ನಿಜರೂಪವನ್ನು ಹೇಗೆ ತೋರಿಸಿದನು?

    Answer

    ಅಕ್ಬರನಿಗೆ ಸಾಧು ತನ್ನ ನಿಜರೂಪವನ್ನು ತೋರಿಸಲು, ನಿಧಾನವಾಗಿ ತನ್ನ ಗಡ್ಡ ಮೀಸೆಗಳನ್ನು ಕಳಚಿದನು. ಆಗ ಎದುರಿಗೆ ಬೀರಬಲ್ ನಿಂತಿದ್ದನು.

ಇ) ಕೆಳಗಿನ ಪ್ರಶ್ನೆಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರು ಹಾಗೂ ಸಾಧುವಿನ ನಡುವೆ ನಡೆದ ಸಂಭಾಷಣೆ ಏನು?

    Answer

    ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರು ಸಾಧುವಿಗೆ ಪ್ರಶ್ನೆಗಳನ್ನು ಕೇಳಿದರು. ಅಬುಲ್ ಫಜಲ್ ಕಳೆದುಹೋದುದನ್ನು ಮತ್ತೆ ಪಡೆಯಲಾಗದ್ದು ಯಾವುದು ಎಂದು ಕೇಳಿದಾಗ, ಸಾಧು ಜೀವ, ಅವಕಾಶ, ಸಮಯ ಎಂದನು. ತೋದರಮಲ್ಲ ಜಗತ್ತಿನಲ್ಲಿ ಅತ್ಯುತ್ತಮನಾದ ಸ್ನೇಹಿತನಾರು ಎಂದು ಕೇಳಿದಾಗ, ಸಾಧು ಯುಕ್ತಾಯುಕ್ತ ಪರಿಜ್ಞಾನ, ವ್ಯಕ್ತಿಯ ಮುಂದಾಲೋಚನೆ ಎಂದನು. ಫೈಜಿ ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು ಎಂದು ಕೇಳಿದಾಗ, ಸಾಧು ಜ್ಞಾನ ಎಂದನು. ಮಾನ್‍ಸಿಂಗ್ ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ, ಮಾರುತಕ್ಕಿಂತ ವೇಗವಾದುದು ಮತ್ತು ಅತ್ಯಂತ ಸಿಹಿಯಾದುದು ಯಾವುದು ಎಂದು ಕೇಳಿದಾಗ, ಸಾಧು ಅನುಕ್ರಮವಾಗಿ ಧೈರ್ಯ, ಕಲ್ಪನೆ ಮತ್ತು ಮಗುವಿನ ನಗು ಎಂದನು. ತಾನ್‍ಸೇನ್ ಸಂಗೀತದಲ್ಲಿ ಅವಿನಾಶಿ ಯಾವುದು ಎಂದು ಕೇಳಿದಾಗ, ಸಾಧು ಸ್ವರಗಳು ಎಂದು ಉತ್ತರಿಸಿದನು. ಹೀಗೆ ವಿದ್ವಾಂಸರು ಮತ್ತು ಸಾಧುವಿನ ನಡುವೆ ಸಂಭಾಷಣೆ ನಡೆಯಿತು.

ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ.

  1. ೧. “ಎಂಥ ಕೆಲಸ ಆಗಿಹೋಯಿತು.”

    Answer

    ಈ ಮಾತನ್ನು ಅಕ್ಬರನು ತನ್ನ ಮನಸ್ಸಿನಲ್ಲಿ ಅಂದುಕೊಂಡನು.

  2. ೨. “ಕಳೆದು ಹೋದುದನ್ನು ಮತ್ತೆ ಪಡೆಯಲಾಗದ್ದು ಯಾವುದು?”

    Answer

    ಈ ಮಾತನ್ನು ಅಬುಲ್ ಫಜಲ್ ಸಾಧುವಿಗೆ ಹೇಳಿದನು.

  3. ೩. “ನನ್ನ ಮಂತ್ರಿ ಬೀರಬಲ್ ಕಾಣೆಯಾಗಿದ್ದಾನೆ.”

    Answer

    ಈ ಮಾತನ್ನು ಅಕ್ಬರನು ಸಾಧುವಿಗೆ ಹೇಳಿದನು.

ಉ) ಪ್ರತಿ ಹೇಳಿಕೆಯ ಕೆಳಗೆ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಅಕ್ಬರನಿಗೆ ಅಸಮಾಧಾನ ಉಂಟು ಮಾಡಿದ ವ್ಯಕ್ತಿ ____________

    Answer

    ೧. ಅಕ್ಬರನಿಗೆ ಅಸಮಾಧಾನ ಉಂಟು ಮಾಡಿದ ವ್ಯಕ್ತಿ ಈ) ಬೀರಬಲ್

  2. ಅ) ಮಾನ್ ಸಿಂಗ್

  3. ಆ) ತೋದರ ಮಲ್ಲ

  4. ಇ) ತಾನ್ ಸೇನ್

  5. ಈ) ಬೀರಬಲ್

  6. ೨. ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬರುವಾಗ ಧರಿಸಿದ್ದ ವೇಷ ____________

    Answer

    ೨. ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬರುವಾಗ ಧರಿಸಿದ್ದ ವೇಷ ಆ) ಸಾಧು

  7. ಅ) ಮಂತ್ರಿ

  8. ಆ) ಸಾಧು

  9. ಇ) ವಿದ್ವಾಂಸ

  10. ಈ) ವ್ಯಾಪಾರಿ

  11. ೩. ಮಾರುತಕ್ಕಿಂತ ವೇಗವಾದುದು ____________

    Answer

    ೩. ಮಾರುತಕ್ಕಿಂತ ವೇಗವಾದುದು ಇ) ಕಲ್ಪನೆ

  12. ಅ) ಜ್ಞಾನ

  13. ಆ) ಧೈರ್ಯ

  14. ಇ) ಕಲ್ಪನೆ

  15. ಈ) ಸ್ವಾರ್ಥ

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ಅಸಮಾಧಾನ x ________________

    Answer

    ೧. ಅಸಮಾಧಾನ x ಸಮಾಧಾನ

  2. ೨. ಮಿತ್ರ x ________________

    Answer

    ೨. ಮಿತ್ರ x ಶತ್ರು

  3. ೩. ಸೇವಕ x ________________

    Answer

    ೩. ಸೇವಕ x ಯಜಮಾನ

  4. ೪. ಬುದ್ಧಿವಂತ x ________________

    Answer

    ೪. ಬುದ್ಧಿವಂತ x ಮೂರ್ಖ

  5. ೫. ಜ್ಞಾನ x ________________

    Answer

    ೫. ಜ್ಞಾನ x ಅಜ್ಞಾನ

  6. ೬. ಸಿಹಿ x ________________

    Answer

    ೬. ಸಿಹಿ x ಕಹಿ

  7. ೭. ನಗು x ________________

    Answer

    ೭. ನಗು x ಅಳು

  8. ೮. ಸ್ವಾರ್ಥ x ________________

    Answer

    ೮. ಸ್ವಾರ್ಥ x ನಿಸ್ವಾರ್ಥ

ಆ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ತವಕ :________________________________________________________

    Model sentence

    ತವಕ: ನನಗೆ ಹೊಸ ಸೈಕಲ್ ತರುವರೆಂದು ತಿಳಿದು ತುಂಬಾ ತವಕವಾಯಿತು.

  2. ೨. ಮೇಧಾವಿ :________________________________________________________

    Model sentence

    ಮೇಧಾವಿ: ನಮ್ಮ ತರಗತಿಯಲ್ಲಿ ರಮೇಶನು ತುಂಬಾ ಮೇಧಾವಿ.

  3. ೩. ತೇಜಸ್ವಿ :________________________________________________________

    Model sentence

    ತೇಜಸ್ವಿ: ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ತುಂಬಾ ತೇಜಸ್ವಿಯಾಗಿ ಕಾಣುತ್ತಾರೆ.

  4. ೪. ಉಡುಗೊರೆ:________________________________________________________

    Model sentence

    ಉಡುಗೊರೆ: ನನ್ನ ಹುಟ್ಟುಹಬ್ಬಕ್ಕೆ ಅಪ್ಪ ಒಂದು ಸುಂದರವಾದ ಉಡುಗೊರೆ ತಂದರು.

  5. ೫. ಜ್ಞಾನ :________________________________________________________

    Model sentence

    ಜ್ಞಾನ: ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ.

ಇ) ಇಲ್ಲಿರುವ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಅತ್ಯುತ್ತಮ = ________________ + ________________

    Answer

    ೧. ಅತ್ಯುತ್ತಮ = ಅತಿ + ಉತ್ತಮ

  2. ೨. ಅವನೊಬ್ಬ = ________________ + ________________

    Answer

    ೨. ಅವನೊಬ್ಬ = ಅವನು + ಒಬ್ಬ

  3. ೩. ಮುಖವನ್ನು = ________________ + ________________

    Answer

    ೩. ಮುಖವನ್ನು = ಮುಖ + ಅನ್ನು

  4. ೪. ಕಾಣೆಯಾಗು = ________________ + ________________

    Answer

    ೪. ಕಾಣೆಯಾಗು = ಕಾಣೆ + ಆಗು

IV. ಸೈದ್ಧಾಂತಿಕ ವ್ಯಾಕರಣ :

ಅ) ಲೇಖನ ಚಿಹ್ನೆಗಳು.

  1. ಬರವಣಿಗೆಯಲ್ಲಿ ಲೇಖನ ಚಿಹ್ನೆಗಳು ಅತ್ಯಂತ ಮಹತ್ವವನ್ನು ಪಡೆಯುತ್ತವೆ. ಮಾತಿನಲ್ಲಿ ಧ್ವನಿಯ ಏರಿಳಿತಗಳ ಮೂಲಕ ನಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಬಹುದು. ಅದೇರೀತಿ ಲೇಖನ ಚಿಹ್ನೆಗಳ ಮೂಲಕ ಬರವಣಿಗೆಯಲ್ಲಿ ನಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಬಹುದಾಗಿದೆ. ಅವುಗಳನ್ನು ಅರಿತು ಬರವಣಿಗೆಯಲ್ಲಿ ಬಳಸುವುದನ್ನು ರೂಢಿಮಾಡಿಕೊಳ್ಳಬೇಕು.

  2. ೧. ಪೂರ್ಣವಿರಾಮ (.) - ಕ್ರಿಯೆಯಿಂದ ಪೂರ್ಣಗೊಂಡ ವಾಕ್ಯದ ಕೊನೆಯಲ್ಲಿ ಚಿಹ್ನೆಯನ್ನು ಬಳಸಬೇಕು.

  3. ೨. ಅರ್ಧವಿರಾಮ (;) - ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗುವ ಉಪವಾಕ್ಯಗಳ ಕೊನೆಯಲ್ಲಿ ಅರ್ಧವಿರಾಮವನ್ನು ಬಳಸಲಾಗುತ್ತದೆ.

  4. ೩. ಅಲ್ಪವಿರಾಮ (,) - ಕರ್ತೃ, ಕರ್ಮ, ಕ್ರಿಯಾ ಪದಗಳಿಗೆ ಬೇರೆ ಬೇರೆ ವಿಶೇಷಣಗಳನ್ನು ನೀಡಿದಾಗ ಅಲ್ಪವಿರಾಮವನ್ನು ಬಳಸಲಾಗುತ್ತದೆ.

  5. ೪. ಪ್ರಶ್ನಾರ್ಥಕ (?) - ಪ್ರಶ್ನೆ ರೂಪದ ಪದ ಮತ್ತು ವಾಕ್ಯಗಳ ಮುಂದೆ ಬಳಸುವ ಚಿಹ್ನೆ ಇದಾಗಿದೆ.

  6. ೫. ಭಾವಸೂಚಕ (!) - ಅಚ್ಚರಿ, ಖೇದ, ಸಂತೋಷ, ವಿಷಾದ ಇತ್ಯಾದಿ ಭಾವಗಳನ್ನು ಸೂಚಿಸುವ ಸಂದರ್ಭಗಳಲ್ಲಿ ಭಾವಸೂಚಕ ಚಿಹ್ನೆ ಬಳಸಬೇಕು.

  7. ೬. ಉದ್ಧರಣ (“ ”) - ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು.

  8. ೭. ಆವರಣ ಚಿಹ್ನೆ ( ) - ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.

  9. ೮. ವಿವರಣ ಚಿಹ್ನೆ (:) - ಒಂದು ಅಭಿಪ್ರಾಯದ ವಿವರಣೆಯನ್ನು ನೀಡುವಾಗ ಈ ಚಿಹ್ನೆಯನ್ನು ಬಳಸಬೇಕು.

ಆ) ಈ ಕೆಳಗಿನ ವಾಕ್ಯಗಳಿಗೆ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ.

  1. ೧. ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ವಿನಾಯಕ ಅನಂತಮೂರ್ತಿ ಕಾರ್ನಾಡ ಕಂಬಾರ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

  2. ೨. ಬಸವಣ್ಣನವರು ದಯವೇ ಧರ್ಮದ ಮೂಲ ಎಂದು ಹೇಳಿದರು

    Answer

    ಬಸವಣ್ಣನವರು “ದಯವೇ ಧರ್ಮದ ಮೂಲ” ಎಂದು ಹೇಳಿದರು.

  3. ೩. ಪಂಪ ಯಾವ ಶತಮಾನದ ಕವಿ

    Answer

    ಪಂಪ ಯಾವ ಶತಮಾನದ ಕವಿ?

  4. ೪. ಅಯ್ಯೋ ವಿಧಿ ಬರಹವನ್ನು ಯಾರೂ ಅಳಿಸಲಾರರು

    Answer

    ಅಯ್ಯೋ! ವಿಧಿ ಬರಹವನ್ನು ಯಾರೂ ಅಳಿಸಲಾರರು.

ಇ) ಈ ಕೆಳಗಿನ ವಾಕ್ಯಗಳನ್ನು ಪ್ರಶ್ನಾರ್ಥಕ ವಾಕ್ಯಗಳನ್ನಾಗಿ ಪರಿವರ್ತಿಸಿರಿ.

  1. ೧. ಅಕ್ಬರನಿಗೆ ಬೀರಬಲ್ಲನ ಮೇಲೆ ಅಸಮಾಧಾನ ಉಂಟಾಯಿತು.

    Answer

    ಅಕ್ಬರನಿಗೆ ಬೀರಬಲ್ಲನ ಮೇಲೆ ಅಸಮಾಧಾನ ಉಂಟಾಯಿತೇ?

  2. ೨. ಅಕ್ಬರ್ ಬೀರಬಲ್ಲನಿಗಾಗಿ ಹುಡುಕಾಡಿಸಿದ.

    Answer

    ಅಕ್ಬರ್ ಬೀರಬಲ್ಲನಿಗಾಗಿ ಹುಡುಕಾಡಿಸಿದನೇ?

  3. ೩. ಸಾಧುವಿನ ವೇಷದಲ್ಲಿ ಬಂದಿದ್ದವನು ಬೀರಬಲ್ಲನೇ ಆಗಿದ್ದ.

    Answer

    ಸಾಧುವಿನ ವೇಷದಲ್ಲಿ ಬಂದಿದ್ದವನು ಬೀರಬಲ್ಲನೇ ಆಗಿದ್ದನೇ?

V. ಚಟುವಟಿಕೆಗಳು :

  1. ೧. ಕರ್ಣ-ದುರ್ಯೋಧನ, ಕೃಷ್ಣ-ಕುಚೇಲ ಮೊದಲಾದವರ ಕಥೆಗಳನ್ನು ಓದಿ ಆತ್ಮೀಯ ಸ್ನೇಹದ ಮಹತ್ವವನ್ನು ತಿಳಿಯಿರಿ.

  2. ೨. ಚೆನ್ನವೀರ ಕಣವಿ ಅವರ ‘ಗೆಳೆತನ’ ಪದ್ಯವನ್ನು ಓದಿರಿ.

  3. ೩. ಗೆಳೆತನದ ಮಹತ್ವ ಸಾರುವ ಹೇಳಿಕೆಗಳನ್ನು ಸಂಗ್ರಹಿಸಿರಿ.

  4. ೪. ಗೆಳೆತನದ ಲಕ್ಷಣಗಳನ್ನು ಪಟ್ಟಿಮಾಡಿರಿ.

Interactive Lab