CRECT Education

Practice & Play: A Temple for a Teacher

Description

Practice comprehension and vocabulary from Lesson 21: ಶಿಕ್ಷಕನಿಗೊಂದು ಗುಡಿ

ಗದ್ಯ (prose) · ಚಿದ್ರೆ ಶಂಕರಯ್ಯಸ್ವಾಮಿ

ಪಠ್ಯFull text

ಅಥರ್ಗಾ ಎಂಬುದು ಒಂದು ಗ್ರಾಮ, ಇದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ. ಅಲ್ಲೊಂದು ಗುಡಿ. ಊರ ಜನರ ದೈನಂದಿನ ಚಟುವಟಿಕೆ ಪ್ರಾರಂಭಗೊಳ್ಳುವುದು ಈ ಗುಡಿಯಲ್ಲಿಯ ಮೂರ್ತಿಯ ದರ್ಶನದ ನಂತರವೆ. ಹೆಂಗಳೆಯರೆಲ್ಲ ಕಾಯಿ ಕರ್ಪೂರದೊಂದಿಗೆ ಗುಡಿಗೆ ಹೋಗಿ ತಮ್ಮ ಮಕ್ಕಳ ಉಜ್ವಲ ಶಿಕ್ಷಣಕ್ಕಾಗಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಪ್ರದಕ್ಷಿಣೆ ಹಾಕುತ್ತಾರೆ. ಉರುಳು ಸೇವೆ ಮಾಡುತ್ತಾರೆ. ಈ ಮೊದಲು ಅಥರ್ಗಾ ಒಂದು ಕೊಂಪೆ. ಅನಕ್ಷರತೆಯ ತವರು ಹಾಗೂ ದುರ್ಗುಣಗಳ ಬೀಡಾಗಿತ್ತು. ರೇವಣಸಿದ್ದಪ್ಪ ಮಾಸ್ತರರ ಆಗಮನದಿಂದ ಕೊಂಪೆ ಸಂಪಿಗೆಯಾಯಿತು. ಜನರನ್ನು ತಿದ್ದಿದರು, ತೀಡಿದರು. ದುಡಿಯಲು ಶಕ್ತಿ ನೀಡಿದರು. ಕತ್ತಲಿದ್ದ ಮನೆಗೆ ಬೆಳಕು ತಂದರು. ಈ ಬಗೆಗೆ ಇಂದಿಗೂ ಹಿರಿಯರು ಹಾಗೂ ವೃದ್ಧರು ಹಾಡಿ ಹೊಗಳುತ್ತಾರೆ. ಅವರು ಮಾಡಿ ತೋರಿಸಿದ್ದು ಒಂದೇ ಎರಡೇ! ಗ್ರಾಮಸುಧಾರಣೆ, ಯುವಕರಿಗೆ ಮಾರ್ಗದರ್ಶನ, ಕೃಷಿಯಲ್ಲಿ ಉತ್ತೇಜನ, ಮೂಢನಂಬಿಕೆ ವಿರುದ್ಧ ತಿಳಿವಳಿಕೆ, ಗುಡಿ ಕೈಗಾರಿಕೆ ಬಗ್ಗೆ ಕಲ್ಪನೆ ಮೂಡಿಸಿದರು. ಹೆಣ್ಣುಮಕ್ಕಳ ಸಮಾನತೆ, ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಿದ್ದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಿಂದ ಈ ಗ್ರಾಮ ಮಾದರಿ ಗ್ರಾಮವಾಯಿತು. ಗ್ರಾಮಕ್ಕೆ ಸೌಕರ್ಯಗಳು ಬರಲಾರಂಭಿಸಿದವು, ವ್ಯಾಜ್ಯಗಳು ನ್ಯಾಯಕಟ್ಟೆಯಲ್ಲಿಯೇ ತೀರ್ಮಾನಗೊಳ್ಳುತ್ತಿದ್ದವು. ಹೀಗೆ ಮಾಸ್ತರರು ಜನಸೇವೆಯಲ್ಲಿಯೇ ಕೊನೆಯುಸಿರೆಳೆದರು. ಈಗ ಊರ ಮಧ್ಯದಲ್ಲಿಯೇ ಈ ಸಮಾಜಮುಖಿ ಮಾಸ್ತರರಿಗೊಂದು ಗುಡಿ. ಮಾಸ್ತರರ ಆಳೆತ್ತರದ ಪ್ರತಿಮೆ ಸ್ಥಾಪನೆಗೊಂಡಿತು. ನಿತ್ಯ ಎರಡು ಬಾರಿ ಪೂಜೆ. ಅದಕ್ಕೊಬ್ಬ ಅರ್ಚಕ. ಈ ಶಿಕ್ಷಕರಿಗಾಗಿ ಪ್ರತಿ ವರ್ಷ ಶಿವರಾತ್ರಿಯಂದು ಭಾರಿ ಜಾತ್ರೆ ನಡೆಯುತ್ತದೆ. ಮಾಸ್ತರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡುತ್ತಾರೆ. ಇಡೀ ರಾತ್ರಿ ಭಜನೆ, ಕೀರ್ತನೆ ನಡೆಯುತ್ತದೆ. “ಊರವರು ನಾವು ಮಾಸ್ತರರ ಜಾತ್ರೆ ಮಾಡ್ತೀವಿ. ಅವ್ರನ್ನ ನಾವು ದೇವರಂತ ನಂಬಿವಿ” ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಗುರುಬ್ರಹ್ಮ! ಗುರುವಿಷ್ಣು! ಗುರುದೇವೋ ಮಹೇಶ್ವರ” ಎಂಬ ಆರ್ಯೋಕ್ತಿ ಈ ದಿನಗಳಲ್ಲಿ ಸವಕಲಾಗಿದೆ. ಆದರೆ ಇಲ್ಲಿ ಈ ಮಾತುಗಳು ಜೀವಂತವಾಗಿವೆ. ಇದು ಸಾಮಾಜಿಕ ಮೌಲ್ಯದ ಪ್ರತೀಕವಲ್ಲವೇ?

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ೧. ಅಥರ್ಗಾ ಗ್ರಾಮವು ಸಾಕ್ಷರತೆಯ ದೃಷ್ಟಿಯಿಂದ ಮೊದಲು ಹೇಗಿತ್ತು?

    Answer

    ಅಥರ್ಗಾ ಗ್ರಾಮವು ಸಾಕ್ಷರತೆಯ ದೃಷ್ಟಿಯಿಂದ ಮೊದಲು ಅನಕ್ಷರತೆಯ ತವರಾಗಿತ್ತು.

  2. ೨. ರೇವಣಸಿದ್ದಪ್ಪ ಮಾಸ್ತರರು ಅಥರ್ಗಾ ಗ್ರಾಮವನ್ನು ಹೇಗೆ ಸುಧಾರಣೆ ಮಾಡಿದರು?

    Answer

    ರೇವಣಸಿದ್ದಪ್ಪ ಮಾಸ್ತರರು ಜನರನ್ನು ತಿದ್ದಿ, ದುಡಿಯಲು ಶಕ್ತಿ ನೀಡಿ, ಗ್ರಾಮಸುಧಾರಣೆ, ಯುವಕರಿಗೆ ಮಾರ್ಗದರ್ಶನ, ಕೃಷಿಯಲ್ಲಿ ಉತ್ತೇಜನ, ಮೂಢನಂಬಿಕೆ ವಿರುದ್ಧ ತಿಳಿವಳಿಕೆ, ಗುಡಿ ಕೈಗಾರಿಕೆ, ಹೆಣ್ಣುಮಕ್ಕಳ ಸಮಾನತೆ ಮತ್ತು ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸುವ ಮೂಲಕ ಅಥರ್ಗಾ ಗ್ರಾಮವನ್ನು ಸುಧಾರಣೆ ಮಾಡಿದರು.

  3. ೩. ಮಾಸ್ತರರನ್ನು ಊರಿನ ಜನ ಹೇಗೆ ಆರಾಧಿಸುತ್ತಾರೆ?

    Answer

    ಊರಿನ ಜನರು ಮಾಸ್ತರರಿಗೆ ಗುಡಿ ಕಟ್ಟಿ ಪ್ರತಿಮೆ ಸ್ಥಾಪಿಸಿ ನಿತ್ಯ ಎರಡು ಬಾರಿ ಪೂಜೆ ಮಾಡುತ್ತಾರೆ; ಪ್ರತಿ ವರ್ಷ ಶಿವರಾತ್ರಿಯಂದು ಜಾತ್ರೆ ನಡೆಸಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಾರೆ ಮತ್ತು ರಾತ್ರಿ ಭಜನೆ-ಕೀರ್ತನೆ ನಡೆಸುತ್ತಾರೆ.

  4. ೪. 'ನಾನು ಶಿಕ್ಷಕನಾದರೆ' ವಿಷಯ ಕುರಿತು ತರಗತಿಯಲ್ಲಿ ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳಿರಿ.

Interactive Lab